April 10, 2026
Friday, April 10, 2026
spot_img

ಟೀಕೆಗಳಿಗೆ ಡೋಂಟ್ ಕೇರ್.. ಟೀಮ್ ಇಂಡಿಯಾ ಬ್ಯಾಟರ್‌ಗಳಿಗೆ ಪಾಕ್ ಸ್ಪಿನ್ನರ್ ಓಪನ್ ಚಾಲೆಂಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಖ್ ಈಗ ಕ್ರಿಕೆಟ್ ಲೋಕದ ಹಾಟ್ ಟಾಪಿಕ್. ಅವರ ಕೈಬೀಸುವ ವಿಭಿನ್ನ ಶೈಲಿಯ ಬೌಲಿಂಗ್ ಆಕ್ಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಈ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗರಾದ ಆಕಾಶ್ ಚೋಪ್ರಾ ಮತ್ತು ಶ್ರೀವಾಸ್ತವ್ ಗೋಸ್ವಾಮಿ ಎತ್ತಿದ್ದ ಪ್ರಶ್ನೆಗಳಿಗೆ ತಾರಿಖ್ ಈಗ ಖಡಕ್ ಉತ್ತರ ನೀಡಿದ್ದಾರೆ.

ತಮ್ಮ ಬೌಲಿಂಗ್ ಶೈಲಿಯ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆಗಳನ್ನು ತಳ್ಳಿಹಾಕಿರುವ ಉಸ್ಮಾನ್ ತಾರಿಖ್, “ಭಾರತೀಯರು ನನ್ನ ಬಗ್ಗೆ ಏನು ಹೇಳುತ್ತಾರೆ ಎಂಬುದು ನನಗೆ ಮುಖ್ಯವಲ್ಲ. ಅವರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ, ನಮ್ಮ ವಿರುದ್ಧ ಆಡಲು ಅವರು ಒತ್ತಡದಲ್ಲಿದ್ದಾರೆ ಎಂದರ್ಥ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ತನ್ನ ಬೌಲಿಂಗ್ ಶೈಲಿ ಕಾನೂನುಬದ್ಧವಾಗಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ನನ್ನ ಬೌಲಿಂಗ್ ಪರೀಕ್ಷಿಸಿ ಕ್ಲೀನ್ ಚಿಟ್ ನೀಡಿವೆ. ಹೀಗಿರುವಾಗ ಬೇರೆಯವರ ಟೀಕೆಗೆ ಯಾವುದೇ ಬೆಲೆಯಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ 15 ರಂದು ನಡೆಯಲಿರುವ ಹೈವೋಲ್ಟೇಜ್ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮುನ್ನವೇ ಈ ಚರ್ಚೆ ಕಾವೇರಿದೆ. “ಮುಂದಿನ ಪಂದ್ಯದ ಹಿನ್ನೆಲೆಯಲ್ಲಿ ಭಾರತೀಯ ಬ್ಯಾಟರ್‌ಗಳು ನನ್ನ ಎಸೆತಗಳನ್ನು ಎದುರಿಸಲು ಆತಂಕಗೊಂಡಿದ್ದಾರೆ, ಅದಕ್ಕಾಗಿಯೇ ಈ ಕಿರಿಕ್ ಶುರು ಮಾಡಿದ್ದಾರೆ” ಎಂಬುದು ತಾರಿಖ್ ಅವರ ವಾದ.

ಆಸ್ಟ್ರೇಲಿಯಾದ ಕ್ಯಾಮರೋನ್ ಗ್ರೀನ್ ಅವರು ತಾರಿಖ್ ಬೌಲಿಂಗ್‌ನಲ್ಲಿ ಔಟಾದಾಗ ಅಸಮಾಧಾನ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿತ್ತು. ಅಂದಿನಿಂದ ಟಿ20 ವಿಶ್ವಕಪ್ ವರೆಗೂ ಅವರ ಬೌಲಿಂಗ್ ಆಕ್ಷನ್ ಸದ್ದು ಮಾಡುತ್ತಲೇ ಇದೆ. ಆದರೆ ತಾರಿಖ್ ಮಾತ್ರ ತಮ್ಮ ವಿಭಿನ್ನ ಬೌಲಿಂಗ್ ಮೂಲಕ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗುವುದನ್ನು ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !