ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ರಾಜಧಾನಿ ಮಾಸ್ಕೋವನ್ನು ಗುರಿಯಾಗಿಸಿಕೊಂಡು ಉಕ್ರೇನ್ ಮಂಗಳವಾರ ಬೃಹತ್ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದರೆ, ಕನಿಷ್ಠ ಮೂವರಿಗೆ ಗಾಯವಾಗಿದೆ.
ಕೈವ್‌ನಿಂದ ಸುಮಾರು 337 ಡ್ರೋನ್‌ಗಳನ್ನು ಹಾರಿಸಲಾಗಿದ್ದು, ಅವುಗಳಲ್ಲಿ 91 ಮಾಸ್ಕೋ ಪ್ರದೇಶವನ್ನು ಗುರಿಯಾಗಿಸಿಕೊಂಡಿವೆ. ಯುದ್ಧ ಪ್ರಾರಂಭವಾದ ನಂತರ ಉಕ್ರೇನ್ ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ ಎಂದು ಹೇಳಲಾಗಿದೆ.
ಉಕ್ರೇನ್ ಗಡಿಯಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ರಷ್ಯಾದ ರಾಜಧಾನಿಯ ಮೇಲೆ ನಡೆದ ಈ ದಾಳಿ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸೌದಿ ಅರೇಬಿಯಾದಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕ ಮಾರ್ಕೊ ರುಬಿಯೊ ಅವರನ್ನು ಭೇಟಿ ಮಾಡುವ ಮೊದಲು ನಡೆದಿದೆ. ರಷ್ಯಾದ ರಕ್ಷಣಾ ಸಚಿವಾಲಯವು ತನ್ನ ಸೇನೆಯು ಒಟ್ಟು 337 ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದೆ, ಇದರಲ್ಲಿ ಮಾಸ್ಕೋ ಪ್ರದೇಶದ ಮೇಲೆ ಹಾರಿಸಲಾಗಿದ್ದ 91 ಮತ್ತು ಕುರ್ಸ್ಕ್ ಪ್ರದೇಶದ ಮೇಲೆ ಹಾರಿಸಿದ್ದ 126 ಡ್ರೋನ್‌ಗಳು ಸೇರಿವೆ.
ಮಾಸ್ಕೋ ಪ್ರದೇಶದ ಗವರ್ನರ್ ಆಂಡ್ರೇ ವೊರೊಬಿಯೊವ್ ಅವರು ದಾಳಿಯ ಬಗ್ಗೆ ಮಾತನಾಡಿದ್ದು, ಒಬ್ಬರು ಮೃತಪಟ್ಟಿದ್ದರೆ, ಮೂವರಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ. ಕಿಟಕಿಗಳು ಹಾರಿಹೋದ ಧ್ವಂಸಗೊಂಡ ಅಪಾರ್ಟ್ಮೆಂಟ್ನ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
ದಾಳಿಯ ನಂತರ ವಾಯು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾಸ್ಕೋದ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಮಾಸ್ಕೋದ ಪೂರ್ವದಲ್ಲಿರುವ ಯಾರೋಸ್ಲಾವ್ಲ್ ಮತ್ತು ನಿಜ್ನಿ ನವ್ಗೊರೊಡ್ ಪ್ರದೇಶಗಳಲ್ಲಿರುವ ಇತರ ಎರಡು ವಿಮಾನ ನಿಲ್ದಾಣಗಳನ್ನು ಸಹ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಕ್ರೇನ್ ಪ್ರಧಾನಿ ಝೆಲೆನ್ಸ್ಕಿ ಶ್ವೇತ ಭವನದಲ್ಲಿ ಮಾತುಕತೆ ನಡೆಸಿದ್ದರು. ಟ್ರಂಪ್, ಯುದ್ಧವನ್ನು ಕೊನೆಗಾಣಿಸಲು ಝೆಲೆನ್ಸ್ಕಿಗೆ ಹೇಳಿದ್ದರು. ಆದರೆ ಉಕ್ರೇನ್ ಪ್ರಧಾನಿ ಈ ಮಾತನ್ನು ತಿರಸ್ಕಾರ ಮಾಡಿದ್ದರು.