ಹೊಸದಿಗಂತ ವರದಿ ಹಾಸನ :
ಬ್ಯಾಂಕುಗಳು ಸರ್ಫೇಸಿ ಕಾಯ್ದೆಯಡಿ ಯಾವುದೇ ಕಾಫಿ ತೋಟವನ್ನೂ ಹರಾಜು ಮಾಡಬಾರದು ಮತ್ತು ಬೆಳೆಗಾರರಿಗೆ ಕಿರುಕುಳ ನೀಡಬಾರದು ಎಂದು ಕರ್ನಾಟಕ ಗ್ರೋವರ್ಸ್ ಫೆಡರೇಷನ್(ರಿ) ಅಧ್ಯಕ್ಷ
ಡಾ. ಎಚ್.ಟಿ.ಮೋಹನ್ ಕುಮಾರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಅತೀವೃಷ್ಠಿ, ಅನಾವೃಷ್ಠಿ, ಕಾರ್ಮಿಕರ ಕೊರತೆ, ವನ್ಯಜೀವಿಗಳ ಹಾವಳಿಯಿಂದ ಕಾಫಿ ಬೆಳೆಗಾರರು ಹಣಕಾಸಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಸಾಲ ಹಾಗೂ ಸುಸ್ತಿ ಸಮಸ್ಯೆ ಬಹಳ ತೀವ್ರವಾಗಿ ಕಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಕಾಫಿ ಬೆಳೆಗಾರರಿಗೆ ಸರ್ಫೇಸಿ ಕಾಯ್ದೆ ಪ್ರಕಾರ ನೋಟೀಸು ನೀಡಿ ತೋಟಗಳನ್ನ ಹರಾಜು ಮಾಡುತ್ತಿರುವ ಬ್ಯಾಂಕುಗಳ ನೀತಿ ಖಂಡನೀಯ ಎಂದು ಆರೋಪ ಮಾಡಿದರು.
ಬ್ಯಾಂಕುಗಳು ಕಾಫಿ ತೋಟಗಳ ಹರಾಜು ಮಾಡುತ್ತಿರುವ ಕುರಿತು ಚಿಕ್ಕಮಗಳೂರು ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಡಿಎಲ್ ಬಿ ಸಿ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥರ ಮೂಲಕ ಮನವಿ ಸಲ್ಲಿಸಿದ್ದರು ಕೂಡ ಬ್ಯಾಂಕ್ ಗಳ ಅಧಿಕಾರಿ ವರ್ಗದವರು ಅತ್ಯಂತ ಉದ್ದಟತನದಿಂದ ಬೆಳೆಗಾರರ ವಿರುದ್ಧ ಕ್ರಮ ಜರುಗಿಸುತ್ತಿವೆ. ಹಾಸನ, ಕೊಡಗು ಜಿಲ್ಲೆಯಲ್ಲಿ ಈ ವರೆಗೂ ಡಿ.ಎಲ್.ಬಿ.ಸಿ ಸಭೆಯನ್ನು ಕರೆಯದೆ ನಿರ್ಲಕ್ಷ್ಯ ತೋರಿದ್ದಾರೆ. ಕೋವಿಡ್ ಪಿಡುಗಿನ ಸಂದರ್ಭ ತೀವ್ರವಾದ ಆರ್ಥಿಕ ಹಿಂಜರಿಕೆ, ನಂತರ ಸತತ ಕಾಫಿ ನಾಡಿನಲ್ಲಿ ಎರಡು ವರ್ಷ ಅತೀವೃಷ್ಠಿ, ಹಾಗೂ ಹಾಲಿ ವರ್ಷ ತೀವ್ರ ಬರಪರಿಸ್ಥಿತಿ ನಿರ್ಮಾಣವಾಗಿದೆ.
ಎನ್.ಡಿ.ಆರ್.ಎಫ್ ನಿಯಮಾವಳಿಯಂತೆ ಪ್ರಕೃತಿ ವಿಕೋಪ ಹವಮಾನ ವೈಪರಿತ್ಯ ವರ್ಷಗಳಲ್ಲಿ ಕೃಷಿ ಸಾಲಗಳ ಕಂತು ಹಾಗೂ ಬಡ್ಡಿ ಮರುಪಾವತಿಗೆ ಬ್ಯಾಂಕುಗಳಿಗೆ ಕಡ್ಡಾಯ ವಿನಾಯಿತಿ ನೀಡಬೇಕು ಎಂಬ ಮಾರ್ಗಸೂಚಿ ಇದ್ದರೂ ಬ್ಯಾಂಕುಗಳು ಪಾಲಿಸದೆ ಈ ಮೂರು ವರ್ಷದಲ್ಲಿ ಬಡ್ಡಿ/ ಕಂತು ಪಾವತಿಸದ ಬೆಳೆಗಾರರ ಖಾತೆಗಳನ್ನು ಎನ್ ಪಿ ಎ ಮಾಡಿ ನೋಟಿಸ್ ಜಾರಿ ಮಾಡುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಕಾಫಿ ಬೆಳೆಗಾರರು ಸಂಕಷ್ಟದಲ್ಲಿರುವುದನ್ನು ಪರಿಗಣಿಸಿ, ಬ್ಯಾಂಕುಗಳು ರೈತರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಸಾಲದ ಕುರಿತು ಮೃದು ಧೋರಣೆ ಅನುಸರಿಸಬೇಕು ಎಂದು ಮನವಿ ಮಾಡಿದರು.
ಕಾಫಿ ಸಹ ಕೃಷಿ ಚಟುವಟಿಕೆಯೇ ಆಗಿರುವುದರಿಂದ ಸರ್ಫೇಸಿ ಕಾಯ್ದೆ ಬಳಸಿ ಬೆಳೆಗಾರರ ವಿರುದ್ಧ ಕ್ರಮ ಕೈಗೊಳ್ಳಬಾರದು. ಹಿಂದೆಲ್ಲಾ ಗ್ರಾಹಕರ ಸಭೆಗಳನ್ನು ನಡೆಸಿ ಬ್ಯಾಂಕರ್‍ಸ್ ಜೊತೆ ಮುಖಾ ಮುಖಿ ಚರ್ಚಿಸಿ ಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುತ್ತಿತ್ತು. ಅದನ್ನೇ ಈಗಲೂ ಮುಂದುವರಿಸಬೇಕು. ಒನ್ ಟೈಮ್ ಸೆಟ್ಲಮೆಂಟ್ ಹೆಸರಲ್ಲಿ ಚಕ್ರಬಡ್ಡಿಗಳು, ಪೆನಾಲ್ಟಿಗಳನ್ನು ಹಾಕಬಾರದು. ಸರಳ ಬಡ್ಡಿ ಆಧಾರದಲ್ಲೇ ಸಾಲದ ಖಾತೆಗಳನ್ನು ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಉಪಾಧ್ಯಕ್ಷ ನಾಗರಾಜ್, ಯತೀಶ್ ಹಾಜರಿದ್ದರು