ಹೊಸದಿಗಂತ ಕಲಬುರಗಿ:
ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ನಡುವಿನ ಕುರ್ಚಿ ಕಾಳಗದಿಂದಾಗಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಡಿ.ಕೆ. ಶಿವಕುಮಾರ್ ಸಿಎಂ ಪಟ್ಟಕ್ಕೇರಲು ಹವಣಿಸುತ್ತಿದ್ದಾರೆ. ಇವರಿಬ್ಬರ ಈ ಪೈಪೋಟಿಯಿಂದಾಗಿ ರಾಜ್ಯದ ಜನತೆ ಬೇಸತ್ತಿದ್ದು, ಮುಂದಿನ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.
ಇನ್ನು ಇರಾನ್-ಇಸ್ರೇಲ್ ಯುದ್ಧದ ಕುರಿತು ಪ್ರಸ್ತಾಪಿಸಿದ ಕಾಗೇರಿ, ಅಂತರರಾಷ್ಟ್ರೀಯ ಬಿಕ್ಕಟ್ಟು ತಂದೊಡ್ಡಿರುವ ಸವಾಲುಗಳನ್ನು ಕೊರೊನಾ ಕಾಲದಂತೆಯೇ ಜಾಣ್ಮೆಯಿಂದ ಎದುರಿಸಬೇಕಿದೆ. ಕೇಂದ್ರ ಸರ್ಕಾರದ ದೂರದೃಷ್ಟಿಯಿಂದಾಗಿ ಭಾರತದಲ್ಲಿ ಶಾಂತಿಯುತ ವಾತಾವರಣವಿದೆ. ಯುದ್ಧದಂತಹ ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಇದೇ ವೇಳೆ ಏರುತ್ತಿರುವ ಇಂಧನ ದರಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್ ಮತ್ತು ಡೀಸೆಲ್ ಸಮಸ್ಯೆ ನಿಜವಾದದ್ದೇ ಆದರೂ, ಇದರ ಹೊಣೆಗಾರಿಕೆಯಲ್ಲಿ ರಾಜ್ಯ ಸರ್ಕಾರವೂ ಪಾಲಿದೆ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಅಶೋಕ್ ಬಗಲಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗವಹಿಸಿದ್ದರು.



