ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಉರಿಯೂತ, ತುರಿಕೆ, ನೋವು ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡಲು ಹಲವರು ಐ ಡ್ರಾಪ್‌ಗಳನ್ನು ಬಳಸುತ್ತಾರೆ. ಆದರೆ, ಅವುಗಳನ್ನು ತಪ್ಪಾಗಿ ಬಳಸಿದರೆ ಕಣ್ಣಿನ ಸೋಂಕು ಅಥವಾ ಇನ್ನಿತರ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು. ವೈದ್ಯರು ಸೂಚಿಸಿದ ರೀತಿಯಲ್ಲಿ ಮತ್ತು ಸ್ವಚ್ಛತೆ ಪಾಲಿಸಿ ಬಳಸುವುದು ಅತ್ಯಂತ ಮುಖ್ಯ.
ವೈದ್ಯರ ಸಲಹೆಯಿಲ್ಲದೆ ಬಳಸುವುದು
ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ, ವಿಶೇಷವಾಗಿ ಸ್ಟೆರಾಯ್ಡ್ ಅಥವಾ ಪ್ರತಿಜೀವಕ ಇರುವ ಐ ಡ್ರಾಪ್ ಗಳನ್ನು ಬಳಸುವುದರಿಂದ ಕಣ್ಣಿನ ಪೊರೆ, ಗ್ಲೂಕೋಮಾ ಅಥವಾ ಔಷಧ ನಿರೋಧಕ ಸೋಂಕಿನ ಅಪಾಯ ಉಂಟಾಗಬಹುದು.
ಡ್ರಾಪರ್ ಅಥವಾ ಕೈ ಸ್ವಚ್ಛತೆ ನಿರ್ಲಕ್ಷಿಸುವುದು
ಕೈ ತೊಳೆಯದೆ ಅಥವಾ ಡ್ರಾಪರ್ ಕಣ್ಣಿಗೆ ತಾಗುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಬಾಟಲಿ ಕೂಡಾ ಕಲುಷಿತವಾಗಬಹುದು.
ಐ ಡ್ರಾಪ್ಹಾಕಿದ ತಕ್ಷಣ ಕಣ್ಣು ಮಿಟುಕಿಸುವುದು
ಐ ಡ್ರಾಪ್ ಹಾಕಿದ ನಂತರ ಕನಿಷ್ಠ ಎರಡು ನಿಮಿಷ ಕಣ್ಣು ಮುಚ್ಚಿ ಇರಬೇಕು. ತಕ್ಷಣವೇ ಮಿಟುಕಿಸುವುದರಿಂದ ಔಷಧದ ಪರಿಣಾಮ ಕಡಿಮೆಯಾಗುತ್ತದೆ.
ಅವಧಿ ಮುಗಿದ ಹನಿಗಳನ್ನು ಬಳಸುವುದು
ಸೀಲ್ ತೆರೆದ ನಂತರ ಒಂದು ತಿಂಗಳಿಗಿಂತ ಹೆಚ್ಚು ಕಾಲ ಐ ಡ್ರಾಪ್ ಗಳನ್ನು ಬಳಸಬಾರದು. ಹಳೆಯ ಐ ಡ್ರಾಪ್ ಗಳು ಸೋಂಕಿಗೆ ಕಾರಣವಾಗಬಹುದು.
ಕಾಂಟ್ಯಾಕ್ಟ್ ಲೆನ್ಸ್ ಬಳಕೆ ನಿಯಮ ಪಾಲಿಸದಿರುವುದು
ಹನಿ ಹಾಕುವ ಮೊದಲು ಲೆನ್ಸ್ ತೆಗೆದು ಹಾಕಿ, ಕನಿಷ್ಠ 15 ನಿಮಿಷಗಳ ಬಳಿಕವೇ ಮರು ಧರಿಸಬೇಕು.
ಎಚ್ಚರಿಕೆ ಲಕ್ಷಣಗಳನ್ನು ನಿರ್ಲಕ್ಷಿಸುವುದು
ತೀವ್ರ ನೋವು, ಕೆಂಪು, ದೃಷ್ಟಿ ಮಂದವಾಗುವುದು, ಬೆಳಕಿಗೆ ಸಂವೇದನೆ ಇತ್ಯಾದಿ ಕಂಡುಬಂದರೆ ತಕ್ಷಣ ಐ ಡ್ರಾಪ್ ಬಳಕೆ ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಬೇಕು.
ಐ ಡ್ರಾಪ್‌ಗಳು ಕಣ್ಣಿನ ಆರೋಗ್ಯಕ್ಕೆ ನೆರವಾಗುವ ಮಹತ್ವದ ಔಷಧಗಳು. ಆದರೆ ಸರಿಯಾದ ವಿಧಾನ, ಸ್ವಚ್ಛತೆ ಮತ್ತು ವೈದ್ಯರ ಸಲಹೆ ಪಾಲಿಸುವುದರಿಂದ ಮಾತ್ರ ಅವು ಸುರಕ್ಷಿತ ಮತ್ತು ಪರಿಣಾಮಕಾರಿ ಆಗುತ್ತವೆ.