ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ 1,000 ಬೃಹತ್ ಉದ್ಯಾನವನಗಳನ್ನು ಬೆಳಗ್ಗೆ 5 ರಿಂದ ರಾತ್ರಿ 10 ರವರೆಗೆ ತೆರೆದಿರಬೇಕೆಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಇದಕ್ಕೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭದ್ರತಾ ಕಾರಣಗಳು, ಪಾರ್ಕ್ ಮೇಂಟೇನೆನ್ಸ್ ಇನ್ನಿತರ ಕಾರಣಗಳನ್ನು ಉಲ್ಲೇಖಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಮಾತ್ರ ಉದ್ಯಾನವನಗಳನ್ನು ತೆರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ. ಅನೇಕ ಉದ್ಯಾನವನಗಳಲ್ಲಿ ಸಿಬ್ಬಂದಿ ಮತ್ತು ಸಿಸಿಟಿವಿಗಳ ಕೊರತೆಯಿದ್ದು ಭದ್ರತಾ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.
ಪಾರ್ಕ್ ಗಳನ್ನು ಹೆಚ್ಚಿನ ಕಾಲ ತೆರೆದಿಡುವುದರಿಂದ ಸಮಾಜ ವಿರೋಧಿ ಶಕ್ತಿಗಳನ್ನು ಆಕರ್ಷಿಸುತ್ತದೆ. ನಾವು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದೇವೆ ಮತ್ತು ಹಳೆಯ ನಿಯಮಗಳಿಗೆ ಬದ್ಧರಾಗಿರಬೇಕೆಂದು ಪಾಲಿಕೆಯನ್ನು ಕೇಳಿದ್ದೇವೆ. ಬೆಳಿಗ್ಗೆ 5 ರಿಂದ 10 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8 ರವರೆಗೆ ಮಾತ್ರ ಉದ್ಯಾನವನಗಳನ್ನು ತೆರೆಯಿರಿ ಮತ್ತು ಮಧ್ಯಾಹ್ನದ ಸಮಯವನ್ನು ನಿರ್ವಹಣೆಗೆ ಬಳಸಿಕೊಳ್ಳಿ ಎಂದು ರಾಮಮೂರ್ತಿ ಹೇಳಿದ್ದಾರೆ.