September 22, 2026
Tuesday, September 22, 2026
spot_img

ಮನೆಗೆ ಹಾವು ಬಂದರೆ ಗಾಬರಿಯಾಗಬೇಡಿ, ಅಪಾಯದಿಂದ ಪಾರಾಗಲು ಈ ಕೆಲಸ ಮಾಡಿ, ಸಾಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಮನೆಯೊಳಗೆ ಹಾವು ಕಾಣಿಸಿಕೊಂಡರೆ ಕ್ಷಣಾರ್ಧದಲ್ಲಿ ಅದನ್ನು ಹೊಡೆಯಲು ಮುಂದಾಗುತ್ತಾರೆ, ಇನ್ನು ಕೆಲವರು ಹಾವನ್ನು ಹೊರಗೆ ಓಡಿಸಲು ಪ್ರಯತ್ನಿಸುತ್ತಾರೆ. ಆದರೆ ಇಂತಹ ಸಂದರ್ಭದಲ್ಲಿ ನಾವು ಆತುರದಲ್ಲಿ ಮಾಡುವ ಸಣ್ಣ ತಪ್ಪೇ ಅಪಾಯಕ್ಕೆ ಕಾರಣವಾಗಬಹುದು. ಹಾಗಾದರೆ ಏನು ಮಾಡಬೇಕು?

ಮನೆಯೊಳಗೆ ಹಾವು ಕಾಣಿಸಿಕೊಂಡ ತಕ್ಷಣ ಮೊದಲನೆಯದಾಗಿ ಅದರ ಬಳಿ ಹೋಗದೆ ಸುರಕ್ಷಿತ ಅಂತರ ಕಾಯ್ದುಕೊಳ್ಳಿ. ಮಕ್ಕಳು, ವೃದ್ಧರು ಮನೆಯಲ್ಲಿರುವ ಇತರರನ್ನು ಹಾವಿನಿಂದ ಮೊದಲು ದೂರವಿರಿಸಿ, ಹಾವು ಇರುವ ಜಾಗವನ್ನು ಮಾತ್ರ ಗಮನಿಸುತ್ತಲೇ ಇರಿ. ಹಾವು ಕ್ಷಣಾರ್ಧದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುತ್ತದೆ ಎಂಬುದನ್ನು ನೆನಪಿಡಿ. ಹಾವು ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬುದನ್ನು ಕಣ್ಣು ತಪ್ಪಿಸದೇ ಸುರಕ್ಷಿತ ಸ್ಥಳದಲ್ಲಿ ನಿಂತು ಗಮನಿಸಿಕೊಳ್ಳಿ. ಈ ವೇಳೆ ಹಾವನ್ನು ಹಿಡಿಯಲು, ಮುಟ್ಟಲು ಅಥವಾ ಕೋಲಿನಿಂದ ಕೆಣಕಲು ಪ್ರಯತ್ನಿಸಬಾರದು. ಹಾವು ವಿಷಕಾರಿಯೇ ಅಥವಾ ವಿಷಕಾರಿಯಲ್ಲವೇ ಎಂಬುದು ಗೊತ್ತಿಲ್ಲದ ಸಂದರ್ಭದಲ್ಲಿ ಅದನ್ನು ಹಿಡಿಯುವ ಸಾಹಸ ಮತ್ತಷ್ಟು ಅಪಾಯವನ್ನು ತಂದೊಡ್ಡಬಹುದು.

ಮನೆಯ ಬಾಗಿಲು-ಕಿಟಕಿಗಳನ್ನು ಸಾಧ್ಯವಾದಷ್ಟು ಸುರಕ್ಷಿತವಾಗಿ ತೆರೆದಿಡುವ ಮೂಲಕ ಹಾವು ಸ್ವತಃ ಹೊರಹೋಗುವ ಅವಕಾಶ ಕಲ್ಪಿಸಬಹುದು. ಆದರೆ ಹಾವು ಇರುವ ಸ್ಥಳಕ್ಕೆ ಹತ್ತಿರ ಹೋಗಿ ಯಾವುದೇ ಕಾರಣಕ್ಕೂ ಇದನ್ನು ಮಾಡಲು ಮುಂದಾಗಬೇಡಿ.

ಹಾವು ಮನೆಯೊಳಗೆ ಅಡಗಿಕೊಂಡಿದ್ದರೆ, ಅನುಭವ ಹೊಂದಿರುವ ಹಾವು ರಕ್ಷಕರ ಅಥವಾ ಸಂಬಂಧಿತ ರಕ್ಷಣಾ ತಂಡದ ನೆರವು ಪಡೆಯುವುದು ಸುರಕ್ಷಿತ ಮಾರ್ಗ. ಹಾವು ಎಲ್ಲಿದೆ ಎಂಬ ಮಾಹಿತಿಯನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಿದರೆ ರಕ್ಷಣಾ ಕಾರ್ಯವೂ ಸುಲಭವಾಗುತ್ತದೆ. ಇನ್ನೊಂದು ಮುಖ್ಯ ವಿಷಯವೆಂದರೆ, ಹಾವು ಕಾಣಿಸಿಕೊಂಡಾಗ ಅದನ್ನು ಕೊಲ್ಲಲು ಪ್ರಯತ್ನಿಸುವುದು ಸಮಸ್ಯೆಗೆ ಪರಿಹಾರವಲ್ಲ. ಹಾವನ್ನು ಕೆಣಕಿದಾಗ ಅದು ಆತ್ಮರಕ್ಷಣೆಗಾಗಿ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಮನೆಯೊಳಗೆ ಹಾವು ಕಾಣಿಸಿಕೊಂಡರೆ ಭಯಕ್ಕಿಂತ ಎಚ್ಚರಿಕೆ ಮುಖ್ಯ.

ನಿಮ್ಮ ವ್ಯಾಪ್ತಿಯ ಅರಣ್ಯ ಇಲಾಖೆಯ ಕಂಟ್ರೋಲ್ ರೂಮ್ ಸಂಖ್ಯೆ ಅಥವಾ ಪೊಲೀಸರ ಸಹಾಯವಾಣಿ (112) ಗೆ ಕರೆ ಮಾಡಿ ಅವರ ನೆರವು ಪಡೆಯಿರಿ. ಅವರಿಂದಲೇ ಸ್ಥಳೀಯ ಹಾವು ಹಿಡಿಯುವವರ ನಂಬರ್ ಪಡೆದು ತರಬೇತಿ ಪಡೆದವರ ಬಳಿಯಲ್ಲಿಯೇ ಹಾವನ್ನು ಮನೆಯಿಂದ ಹೊರಗಟ್ಟಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !