April 5, 2026
Sunday, April 5, 2026
spot_img

ಮೊಬೈಲ್ ಗೀಳಿಗೆ ಬಿದ್ದು ಜೀವನ ಹಾಳುಮಾಡಿಕೊಳ್ಳಬೇಡಿ: ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕಿವಿಮಾತು

ಹೊಸದಿಗಂತ ವರದಿ ​ಚಿತ್ರದುರ್ಗ:

ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಿದ್ದು ಜ್ಞಾಪಕ ಶಕ್ತಿ ಹಾಗೂ ಸೃಜನಶೀಲತೆ ಕಳೆದುಕೊಳ್ಳುವ ಬದಲು, ಗ್ರಂಥಾಲಯಗಳಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಲಿಡ್ಕರ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಮೀಸಲಾತಿಯನ್ನು ನಂಬಿ ಕೂರಬಾರದು. ಸಾವಿರಾರು ಹುದ್ದೆಗಳಿಗೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸುವ ಈ ಕಾಲದಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಅಧ್ಯಯನಶೀಲತೆ ಬಹಳ ಮುಖ್ಯ ಎಂದರು.

ಭಾರತ ದೇಶದ ಅಭಿವೃದ್ಧಿ ಮತ್ತು ಸಮಾನತೆಯ ಹಾದಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಂ ಅವರು ದೇಶದ ಎರಡು ಕಣ್ಣುಗಳಿದ್ದಂತೆ. ಬಾಬೂಜೀಯವರು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ದೇಶದ ಉಪಪ್ರಧಾನಿ ಹುದ್ದೆಯವರೆಗೂ ಏರಲು ಪಟ್ಟ ಕಷ್ಟ ಮತ್ತು ಅವರು ನೀಡಿದ ಕೊಡುಗೆ ನಮಗೆಲ್ಲರಿಗೂ ಆದರ್ಶವಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ:

ಹಸಿರು ಕ್ರಾಂತಿಯ ಹರಿಕಾರ ಬಾಬೂಜೀಯವರ ಆಶಯದಂತೆ ಇಂದು ಸರ್ಕಾರವು ’ಅನ್ನಭಾಗ್ಯ’ದಂತಹ ಯೋಜನೆಗಳ ಮೂಲಕ ಹಸಿವು ಮುಕ್ತ ಸಮಾಜಕ್ಕೆ ಒತ್ತು ನೀಡಿದೆ. ಹಾಸ್ಟೆಲ್ ವ್ಯವಸ್ಥೆಗಳನ್ನು ಉತ್ತಮಪಡಿಸಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳದೆ, ಶ್ರಮವಹಿಸಿ ಓದಿ ತಮ್ಮ ಕುಟುಂಬ ಮತ್ತು ಸಮಾಜದ ಗೌರವವನ್ನು ಎತ್ತಿ ಹಿಡಿಯಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ಡಿ.ಹೆಚ್.ನಟರಾಜ್, ಡಾ.ಬಾಬು ಜಗಜೀವನ್ ರಾಮ್ ಅವರ ಕುರಿತು ಸುಧೀರ್ಘ ಉಪನ್ಯಾಸ ನೀಡಿದರು. ಇದೇ ವೇಳೆ ನಾಲ್ಕು ಮಂದಿ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಸಂವಿಧಾನ ಪೀಠಿಕೆ ವಾಚಿಸಲಾಯಿತು. ಜಯಂತಿ ಅಂಗವಾಗಿ ನಗರದ ವಿವಿಧ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಜರುಗಿದ ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !