ಬೆಳಗಿನ ತಿಂಡಿಗೆ ದಿನಾ ಅದೇ ಇಡ್ಲಿ, ದೋಸೆ ತಿಂದು ಬೇಜಾರಾಗಿದ್ಯಾ? ಹಾಗಿದ್ರೆ ಇವತ್ತು ಮಲೆನಾಡು ಕಡೆ ಫೇಮಸ್ ಆಗಿರೋ ಅಕ್ಕಿ ರೊಟ್ಟಿ ಟ್ರೈ ಮಾಡಿ. ರೊಟ್ಟಿ ಮಾಡುವುದು ಕಷ್ಟ ಎಂದು ಹಲವರು ಹಿಂಜರಿಯುತ್ತಾರೆ. ಆದರೆ ಮಲೆನಾಡಿನ ಪ್ರತಿಯೊಬ್ಬರ ಮನೆಯಲ್ಲಿಯೂ ಇದು ಇದ್ದೇ ಇರುತ್ತದೆ. ಅವರು ಬೆಳಗ್ಗಿನ ತಿಂಡಿಗೆ ನಾನಾ ತರಹದ ತಿಂಡಿಗಳನ್ನು ಮಾಡುವುದು ಕಡಿಮೆ. ಬಹುತೇಕರು ಬೆಳಗ್ಗೆ ಅಥವಾ ಸಂಜೆ ಒಮ್ಮೆಯಾದರೂ ರೊಟ್ಟಿಯನ್ನು ಮಾಡೇ ಮಾಡುತ್ತಾರೆ. ಅದೇ ರೀತಿ ಸಿಂಪಲ್ ಆಗಿ, ಸಾಫ್ಟ್ ಆಗಿ ರೊಟ್ಟಿ ಮಾಡೋ ಟ್ರಿಕ್ ನಿಮಾಗೂ ಬೇಕಾ…
ಬೇಕಾಗುವ ಸಾಮಾಗ್ರಿಗಳು
ಅಕ್ಕಿ ಹಿಟ್ಟು – 2 ಕಪ್
ನೀರು – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ ಅಥವಾ ಎಣ್ಣೆ – 1 ಚಮಚ
ಮಾಡುವ ವಿಧಾನ
ಮೊದಲು ಒಂದು ದಪ್ಪ ಪಾತ್ರೆಗೆ 2 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು 1 ಚಮಚ ತುಪ್ಪ/ಎಣ್ಣೆ ಹಾಕಿ ಚೆನ್ನಾಗಿ ಕುದಿಯಲು ಬಿಡಬೇಕು. ನೀರು ಕುದಿಯುವಾಗ ಅಕ್ಕಿ ಹಿಟ್ಟನ್ನು ಒಂದೇ ಕಡೆ ಹಾಕಿ, ಹಿಟ್ಟಿನ ಮಧ್ಯೆ ಒಂದು ಸಣ್ಣ ಹೊಲ್ ಮಾಡಿ 2-3 ನಿಮಿಷ ಮುಚ್ಚಳ ಮುಚ್ಚಿ ಬೇಯಲು ಬಿಡಬೇಕು. ನಂತರ ಒಂದು ಲಟ್ಟಣಿಗೆಯ ಹಿಂಭಾಗದಿಂದ ಹಿಟ್ಟನ್ನು ಚೆನ್ನಾಗಿ ಗಂಟಿಲ್ಲದಂತೆ ಮಿಕ್ಸ್ ಮಾಡಿ, ಮತ್ತೆ 5 ನಿಮಿಷ ಮುಚ್ಚಿಡಬೇಕು.
ಬಳಿಕ ಹಿಟ್ಟು ಉಗುರು ಬೆಚ್ಚಗಿರುವಾಗ ಕೈಗೆ ಸ್ವಲ್ಪ ನೀರು ಸವರಿಕೊಂಡು, ಹಿಟ್ಟನ್ನು ಚಪಾತಿ ಹಿಟ್ಟಿಗಿಂತಲೂ ಮೃದುವಾಗಿ ಚೆನ್ನಾಗಿ ನಾದಿಕೊಂಡು ಸಣ್ಣ ಉಂಡೆಗಳನ್ನು ಮಾಡಿ ಒಣ ಅಕ್ಕಿ ಹಿಟ್ಟು ಬಳಸಿ ಚಪಾತಿಯಂತೆ ಲಟ್ಟಿಸಹುದು ಅಥವಾ ಹಸಿ ಬಟ್ಟೆ/ಬಾಳೆ ಎಲೆಯ ಮೇಲೆಯೂ ತಟ್ಟಬಹುದು. ನಂತರ ಕಾದ ತವಾದ ಮೇಲೆ ರೊಟ್ಟಿ ಹಾಕಿ, ಎರಡು ಕಡೆ ಹೊಂಬಣ್ಣ ಬರುವವರೆಗೆ ಬೇಯಿಸಿದರೆ ಅಕ್ಕಿ ರೊಟ್ಟಿ ಸಿದ್ಧ.



