March 27, 2026
Friday, March 27, 2026
spot_img

GBA ಚುನಾವಣೆಯಲ್ಲೂ ದೋಸ್ತಿ ಆಸರೆ? ದೇವೇಗೌಡರ ಮನದಾಸೆ ಬಿಚ್ಚಿಟ್ಟ ‘ಮೈತ್ರಿ’ ಮಂತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಮುಂಬರುವ ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿದೆಯೇ? ಎಂಬ ಕುತೂಹಲಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಉತ್ತರ ನೀಡಿದ್ದಾರೆ.

“ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಆಕಾಂಕ್ಷೆ ನಮಗಿದೆ, ಆದರೆ ಅಂತಿಮ ನಿರ್ಧಾರ ಬಿಜೆಪಿಯ ಅಂಗಳದಲ್ಲಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ನಾವು ಎನ್‌ಡಿಎ ಭಾಗವಾಗಿದ್ದೇವೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದರೆ, ನಮ್ಮದು ಪ್ರಾದೇಶಿಕ ಪಕ್ಷ. ಸ್ಥಳೀಯ ಚುನಾವಣೆಗಳಲ್ಲಿ ಒಟ್ಟಾಗಿ ಹೋಗಬೇಕೆಂಬುದು ನಮ್ಮ ಬಯಕೆ. ಅವರು ತಮ್ಮ ನಿಲುವು ತಿಳಿಸಿದ ನಂತರ ನಾವು ಮುಂದಿನ ಹೆಜ್ಜೆ ಇಡುತ್ತೇವೆ,” ಎಂದರು.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಹೋಲಿಸಿದರೆ ಸ್ಥಳೀಯ ಸಂಸ್ಥೆಗಳಲ್ಲಿ ಸೀಟುಗಳ ಸಂಖ್ಯೆ ಕಡಿಮೆ ಇರುತ್ತದೆ. ಹೀಗಾಗಿ ಸೀಟು ಹಂಚಿಕೆ ಸ್ವಲ್ಪ ಕಷ್ಟವಾಗಬಹುದು ಎಂಬ ವಾಸ್ತವವನ್ನು ಅವರು ಒಪ್ಪಿಕೊಂಡರು.

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಬಿಜೆಪಿ ವರಿಷ್ಠರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅವರು ಮರಳಿದ ನಂತರ ಮೈತ್ರಿಯ ಅಂತಿಮ ಸ್ವರೂಪ ಮತ್ತು ಕಾರ್ಯತಂತ್ರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !