May 6, 2026
Wednesday, May 6, 2026
spot_img

ಸ್ಮಾರ್ಟ್ ಪ್ರಯಾಣ, ಡಿಜಿಟಲ್ ಸಂಭ್ರಮ: KSRTC ಮುಡಿಗೆ ಎರಡು ಪ್ರತಿಷ್ಠಿತ ಅವಾರ್ಡ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಹೆಮ್ಮೆಯ ಸಾರಿಗೆ ಸಂಸ್ಥೆ ಕೆ.ಎಸ್.ಆರ್.ಟಿ.ಸಿ ದೇಶದ ಗಮನ ಸೆಳೆಯುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದೆ. ತಂತ್ರಜ್ಞಾನ ಮತ್ತು ಸಾರ್ವಜನಿಕ ಸೇವೆಯಲ್ಲಿನ ಕ್ರಾಂತಿಕಾರಿ ಬದಲಾವಣೆಗಾಗಿ ಪ್ರತಿಷ್ಠಿತ ‘ಇಲೆಟ್ಸ್ ಮೊಬಿಲಿಟಿ ಎಕ್ಸೆಲೆನ್ಸ್’ ಎರಡು ಪ್ರಶಸ್ತಿಗಳನ್ನು ನೀಡಿ ಸಂಸ್ಥೆಯನ್ನು ಗೌರವಿಸಿದೆ.

ಮೈಸೂರು ನಗರದ ಸುಮಾರು 200 ಬಸ್‌ಗಳಲ್ಲಿ ಜಾರಿಗೆ ತಂದಿರುವ ‘ಧ್ವನಿ ಸ್ಪಂದನ’ ಯೋಜನೆಗೆ ‘ಇನೋವೇಶನ್ ಇನ್ ಸಿಟಿಜೆನ್ ಎಂಗೇಜ್‌ಮೆಂಟ್’ ಪ್ರಶಸ್ತಿ ಲಭಿಸಿದೆ. ಜರ್ಮನಿಯ GIZ ಸಂಸ್ಥೆಯ ಜೊತೆಗೂಡಿ ರೂಪಿಸಲಾದ ಈ ತಂತ್ರಜ್ಞಾನವು ವಿಶೇಷಚೇತನರಿಗೆ, ಅದರಲ್ಲೂ ಮುಖ್ಯವಾಗಿ ದೃಷ್ಟಿಹೀನ ಪ್ರಯಾಣಿಕರಿಗೆ ವರದಾನವಾಗಿದೆ. ಯಾವ ಬಸ್ ಎಲ್ಲಿಗೆ ಹೋಗುತ್ತದೆ ಮತ್ತು ಯಾವಾಗ ಇಳಿಯಬೇಕು ಎಂಬುದನ್ನು ಧ್ವನಿಯ ಮೂಲಕವೇ ತಿಳಿಸುವುದರಿಂದ, ಅವರು ಯಾರ ಸಹಾಯವೂ ಇಲ್ಲದೆ ರಾಜಮಾರ್ಗದಂತೆ ಪ್ರಯಾಣಿಸಬಹುದು.

ಸಾರಿಗೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿದ ಸಾಧನೆಗಾಗಿ ‘AWATAR 4.0’ ಯೋಜನೆಗೆ ಎರಡನೇ ಪ್ರಶಸ್ತಿ ಸಂದಿದೆ. ಈಗ ಪ್ರಯಾಣಿಕರು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಟಿಕೆಟ್ ಬುಕ್ ಮಾಡಬಹುದು. ಅಷ್ಟೇ ಅಲ್ಲ, ಬಸ್ಸಿನಲ್ಲಿ ಯುಪಿಐ ಮೂಲಕ ಹಣ ಪಾವತಿಸುವ ವ್ಯವಸ್ಥೆ ಇರುವುದರಿಂದ ‘ಚಿಲ್ಲರೆ ಕೊಡಿ’ ಎನ್ನುವ ಕಿರಿಕಿರಿ ತಪ್ಪಿದಂತಾಗಿದೆ.

ಸಾರ್ವಜನಿಕರ ಸೇವೆಯಲ್ಲಿ ಸದಾ ಮುಂದಿರುವ ಕೆಎಸ್‌ಆರ್‌ಟಿಸಿ, ಈ ಪ್ರಶಸ್ತಿಗಳ ಮೂಲಕ ತನ್ನ ಘನತೆಯನ್ನು ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಎತ್ತರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !