ಹಣ ದ್ವಿಗುಣ ಆಮಿಷ: ಯುವತಿ ಸಹಿತ ತಂಡ ಪೊಲೀಸ್ ಬಲೆಗೆ

ಹೊಸ ದಿಗಂತ ವರದಿ, ಬೆಳಗಾವಿ:

ಬಸ್ಸಿನಲ್ಲಿ ಸಹ ಪ್ರಯಾಣಿಕರಂತೆ ನಟಿಸಿ, ಮೋಹಕ ಜಾಲ ಬೀಸಿ ವ್ಯಕ್ತಿಗಳಿಗೆ ಗಾಳ ಹಾಕುತ್ತಿದ್ದಲ್ಲದೇ, ಹಣ ದ್ವಿಗುಣದ ಆಮಿಷ್ ವೊಡ್ಡಿ ಲಕ್ಷ ಲಕ್ಷ ಪೀಕುತ್ತಿದ್ದ ಖತರ್ನಾಕ ಯುವತಿ ಸೇರಿದಂತೆ ಆಕೆಯ ಗ್ಯಾಂಗ್ ನ್ನು ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ.

ಬೆಳಗಾವಿ ಮೂಲದವಳು ಎನ್ನಲಾದ ಜಾನ್ಹವಿ (35) ಸೇರಿದಂತೆ ಆಕೆ ಸಹಚರರಾದ ಸುಮಾರು ಐದು ಜನರನ್ನು ಕಾಕತಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರಲ್ಲದೇ, ಆರೋಪಿಗಳು ಹಿಂಡಲಗಾ ಜೈಲು ಸೇರುವಂತೆ ಮಾಡಿದ್ದಾರೆ.

25 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದ ಗೋಕಾಕ ನಿವಾಸಿಯೊಬ್ಬರು ಈ ಕುರಿತು ಕಾಕತಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಕಳೆದೆರೆಡು ತಿಂಗಳ ಹಿಂದೆ ನಡೆದಿದ್ದ ಈ ಘಟನೆ ಕುರಿತಂತೆ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಗಳ ಚಲನವಲನ ಚಿತ್ರೀಕರಿಸಲಾಗಿತ್ತು. ಈ ದೃಶ್ಯಾವಳಿಗಳನ್ನು ಆಧರಿಸಿಯೇ ಪೊಲೀಸರು ಮಾರುವೇಷದಲ್ಲಿ ಹಣ ದ್ವಿಗುಣಗೊಳಿಸಿಕೊಡುವಂತೆ ಹೇಳಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಘಟನೆ ವಿವರ….
ಬಸ್ಸಿನಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಗೆ ಗಾಳ ಹಾಕುತ್ತಿದ್ದ ಈ ಜಾನ್ವಿ, ಸಲುಗೆಯಿಂದ ವ್ಯಕ್ತಿಗಳನ್ನು ಪರಿಚಯಿಸಿಕೊಂಡು ಮರಳು ಮಾಡುತ್ತಿದ್ದಲ್ಲದೇ, ತನ್ನ ಪೋನ್ ವಿನಿಮಯ ಮಾಡಿಕೊಂಡು ಸಂಪರ್ಕ ಬೆಳೆಸುತ್ತಿದ್ದಳು. ನಂತರ ಆ ವ್ಯಕ್ತಿಗಳಿಗೆ ಕರೆ ಮಾಡಿ ನಮ್ಮ ಪರಿಚಯಿಸ್ಥರೊಬ್ಬರು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದು, ಅವರು ಸದ್ಯದಲ್ಲಿಯೇ ನಿವೃತ್ತಿ ಹೊಂದಲಿದ್ದಾರೆ. ಅವರಿಂದ ನಿಮಗೆ ಹಣ ದ್ವಿಗುಣ ಮಾಡಿಕೊಡಲಾಗುವುದು ಎಂದು ನಂಬಿಸುತ್ತಿದ್ದಳು.
ಅಲ್ಲದೇ, ಹೇಗಾದರೂ ಮಾಡಿ ಅವರನ್ನು ತನ್ನ ಖೆಡ್ಡಾಕ್ಕೆ ಕೆಡುವಿ ಇಂತಹ ಸ್ಥಳದಲ್ಲಿ ಹಣ ತೆಗೆದುಕೊಂಡು ಬರುವಂತೆ ಹೇಳಿ ಹಣ ವಸೂಲಿ ಮಾಡುತ್ತಿದ್ದಳು. ಅಷ್ಟೇ ಏಕೆ, ವ್ಯಕ್ತಿಗಳು ಹಣದ ಬ್ಯಾಗ್ ನೀಡುವುದೇ ತಡ, ಅಲ್ಲಿ ನಕಲಿ ಪೊಲೀಸರು ಹಾಜರಾಗಿ ಅವಳನ್ನು ಸಹಿತ ಎಲ್ಲರನ್ನು ಬಂಧಿಸಿದಂತೆ ನಾಟಕವಾಡುವುದು ಇವರ ವೃತ್ತಿಯಾಗಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಆದರೆ, ಕಾಕತಿ ಪೊಲೀಸ್ ಠಾಣೆಯ ಸುತ್ತಮುತ್ತಲಿನಲ್ಲಿಯೇ ಆರೋಪಿಗಳು ಗೋಕಾಕ ವ್ಯಕ್ತಿಯನ್ನು ಓಡಾಡಿಸಿ ಹಣ ಪಡೆದುಕೊಂಡಿರುವುದು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿದ್ದವು. ಇವುಗಳನ್ನು ಆಧರಿಸಿ ಕಾರ್ಯಾಚರಣೆಗೆ ಇಳಿದ ಕಾಕತಿ ಪೊಲೀಸರು, ತಾವು ಕೂಡ ಹಣ ದ್ವಿಗುಣ ಮಾಡಿಕೊಡುವ ವ್ಯಕ್ತಿಗಳಂತೆ ಮಾರುವೇಷದಲ್ಲಿ ಹೋಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!