July 30, 2026
Thursday, July 30, 2026
spot_img

ಕರ್ನಾಟಕಕ್ಕೆ ‘ಡಬಲ್ ಶಾಕ್’: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ಬೆನ್ನಲ್ಲೇ ಮೇಕೆದಾಟು ಡಿಪಿಆರ್ ವಾಪಸ್!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಭಾರಿ ಹಿನ್ನೆಡೆಯಾಗಿದ್ದು, ಒಂದೇ ದಿನ ಎರಡು ದೊಡ್ಡ ಆಘಾತಗಳು ಎದುರಾಗಿವೆ. ತಮಿಳುನಾಡಿಗೆ ತಕ್ಷಣವೇ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶ ನೀಡಿದ ಬೆನ್ನಲ್ಲೇ, ಕೇಂದ್ರ ಜಲ ಆಯೋಗವು (CWC) ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (DPR) ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದೆ.

ಕೆಲವು ತಾಂತ್ರಿಕ ಅಂಶಗಳಲ್ಲಿ ಸ್ಪಷ್ಟನೆ ಕೇಳಿದ ಸಿಡಬ್ಲ್ಯೂಸಿ:

ಮೇಕೆದಾಟು ಯೋಜನೆಯ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸದಿದ್ದರೂ, ಅದರಲ್ಲಿರುವ ಕೆಲವು ಪ್ರಮುಖ ತಾಂತ್ರಿಕ ಲೋಪದೋಷಗಳು ಮತ್ತು ಅಂಕಿ-ಅಂಶಗಳ ಬಗ್ಗೆ ಕೇಂದ್ರ ಜಲ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವರದಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮತ್ತು ಮಾರ್ಪಾಡುಗಳನ್ನು ಮಾಡಿ, ಅಗತ್ಯ ಸ್ಪಷ್ಟನೆಗಳೊಂದಿಗೆ ಪರಿಷ್ಕೃತ ಹೊಸ ಯೋಜನಾ ವರದಿಯನ್ನು ಮತ್ತೊಮ್ಮೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ;

ಹಳೆಯ ಅಂಕಿ-ಅಂಶ ಮತ್ತು ನೀರಿನ ಪ್ರಮಾಣ ಹೆಚ್ಚಳವೇ ಕಾರಣ?

ಲಭ್ಯವಿರುವ ಮಾಹಿತಿ ಪ್ರಕಾರ, ರಾಜ್ಯ ಸರ್ಕಾರವು ಮೇಕೆದಾಟು ಯೋಜನೆಯಡಿ ಬೆಂಗಳೂರು ನಗರದ ಕುಡಿಯುವ ನೀರಿನ ಬಳಕೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿತ್ತು. ಸಿಲಿಕಾನ್ ಸಿಟಿಯ ಕುಡಿಯುವ ನೀರಿಗಾಗಿ ಬರೋಬ್ಬರಿ 6.95 ಟಿಎಂಸಿಎಫ್‌ಟಿ ನೀರನ್ನು ಕಾಯ್ದಿರಿಸಲು ಯೋಜಿಸಲಾಗಿತ್ತು. ಆದರೆ ಈ ಬೇಡಿಕೆಯನ್ನು ಬೆಂಬಲಿಸಲು ಸರ್ಕಾರ ಸಲ್ಲಿಸಿರುವ ಅಂಕಿ-ಅಂಶಗಳು ಹಳೆಯದಾಗಿದ್ದು, ಅಪೂರ್ಣವಾಗಿವೆ ಎಂದು ಸಿಡಬ್ಲ್ಯೂಸಿ ಬೆಟ್ಟು ಮಾಡಿದೆ. ಹೀಗಾಗಿ ನೀರಿನ ಹಂಚಿಕೆ ಮತ್ತು ಬಳಕೆಯ ನಿಖರ ವಿವರಗಳನ್ನು ನವೀಕರಿಸಿ ಕಳುಹಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲದ ನೆರಳು ಆವರಿಸಿರುವಾಗಲೇ ಕೇಂದ್ರದಿಂದ ಇಂತಹ ನಿರ್ಧಾರ ಹೊರಬಂದಿರುವುದು ಕಾವೇರಿ ಕೊಳ್ಳದ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !