ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಯ ಪಕ್ಷ ಬೇಕು : ಪ್ರಕಾಶ ಅಂಬೇಡ್ಕರ್

ದಿಗಂತ ವರದಿ ವಿಜಯಪುರ:

ಇಂದಿನ ಜಾತಿ ಆಧಾರಿತ ಪ್ರಜಾಪ್ರಭುತ್ವ ನಿರ್ಮೂಲನೆ ಮಾಡಬೇಕು. ಹೀಗಾಗಿ ನಮ್ಮ ಬಳಿ ಜ್ಯೋತಿಬಾ ಫುಲೆ, ಶಾಹುಮಹಾರಾಜ, ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಯ ಒಂದು ಪಕ್ಷ ಬೇಕು. ಆಗ ಅದನ್ನು ತೊಡೆದುಹಾಕಲು ಪ್ರಯತ್ನಿಸಬಹುದು ಎಂದು ಹಿರಿಯ ವಿಚಾರವಾದಿ, ಮಾಜಿ ಸಂಸದ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶನ ಕವಲಕ್ಕಿ, ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಬಳಗ ವಿಜಯಪುರ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡ 9ನೇ ಮೇ ಸಾಹಿತ್ಯ ಮೇಳದಲ್ಲಿ ಅವರು ಮಾತನಾಡಿದರು.

ಜಾತಿ ಧರ್ಮಗಳ ನಡುವೆ ಕಂದಕವನ್ನುಟುಮಾಡುವ ಕೆಲಸ ರಾಜಕೀಯ ಪಕ್ಷಗಳು ಮಾಡುತ್ತಿವೆ. ಮುಖ್ಯವಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಆಟಾಡುತ್ತಿವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಬದಲಾಯಿಸುವ ಉದ್ದೇಶ ಹೊಂದಿವೆ. ಪ್ರತಿಯೊಬ್ಬರು ಇದರ ವಿರುದ್ಧ ಜಾಗೃತರಾಗಬೇಕಿದೆ. ಐಟಿ ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಇಂದು ಹೊಸ ಮಂದಿರ ಮತ್ತು ಪೂಜಾರಿಗಳು ಹುಟ್ಟಿಕೊಂಡಿದ್ದಾರೆ. ವಿಧಾನಸೌಧ ಮತ್ತು ಸಂಸತ್ ಭವನಗಳು ಮಂದಿರಗಳಾಗಿವೆ. ಶಾಸಕರು ಮತ್ತು ಲೋಕಸಭಾ ಸದಸ್ಯರು ಪೂಜಾರಿಗಳಾಗಿದ್ದಾರೆ ಎಂದರು.

1950ರ ಕಾಂಗ್ರೆಸ್ ಆಡಳಿತದಲ್ಲಿ ಆರ್ಥಿಕ ಕ್ರಾಂತಿ ಬಂತು. ಇದರಿಂದ ಸಣ್ಣ ಸಣ್ಣ ಸಮುದಾಯಗಳು ಆರ್ಥಿಕ ಮೂಲಗಳನ್ನು ಕಳೆದುಕೊಂಡವು. ಬಡಜನರ ಆರ್ಥಿಕ ಮೂಲ ಉಳಿಯಬೇಕಾದರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವುದು ಅವಶ್ಯಕವಾಗಿದೆ ಎಂದರು.

ಖಾಸಗೀಕರಣದಿಂದ ದೇಶವು ಇಂದು ಸಂಕಷ್ಟ ಎದರಿಸುವಂತಾಗಿದೆ. ಸಾರ್ವಜನಿಕ ಶಾಲೆಗಳನ್ನು ಮುಚ್ಚುತ್ತಿರುವುದರಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮೀಸಲಾತಿ ವಿಚಾರದಲ್ಲಿ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ. ಸರ್ಕಾರಿ ಉದ್ಯೋಗಳನ್ನು ಕಡಿತಗೊಳಿಸಲಾಗುತ್ತಿದ್ದು, ಜೊತೆಗೆ ಮೀಸಲಾತಿ ಅಪಾಯದಲ್ಲಿದೆ. ಹೀಗಾಗಿ ಬಾಬಾಸಾಹೇಬರು ಹೇಳಿದ ಶಿಕ್ಷಣ ಸಂಘಟನೆ ಹೋರಾಟ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭ ಹಿರಿಯ ಹೋರಾಟಗಾರರಾದ ಭೀಮಶಿ ಕಲಾದಗಿ, ಪ್ರಕಾಶ ಹಿಟ್ನಳ್ಳಿ, ನಜ್ಮಾ ಬಾಂಗಿ, ತುಕಾರಾಂ ಚಂಚಲಕರ, ಬಸವರಾಜ ಸೂಳಿಬಾವಿ, ರಿಯಾಜ್ ಫಾರೂಕಿ, ಮಲ್ಲಮ್ಮ ಯಾಳವಾರ, ಭಗವಾನ ರೆಡ್ಡಿ, ಕೋಣೇಶ್ವರ ಸ್ವಾಮೀಜಿ, ಅಬ್ದುಲ್ ರೆಹಮಾನ್ ಬಿದರಕುಂದಿ, ಅನಿಲ ಹೊಸಮನಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!