ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಅವರ ವಿರುದ್ಧ ಘೋಷಣೆ ಕೂಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಮೊನ್ನೆ ರೇಖಾ ಗುಪ್ತ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದ. ಅದಾದ ಬಳಿಕ ಇಂದು ಅವರು ಮೊದಲ ಬಾರಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಇಂದೂ ಕೂಡ ಭದ್ರತಾ ವೈಫಲ್ಯ ಸಂಭವಿಸಿದೆ. ವ್ಯಕ್ತಿಯೊಬ್ಬ ಸಿಎಂ ವಿರುದ್ಧ ಘೋಷಣೆಯನ್ನು ಕೂಗಿದ್ದಾನೆ. ಸ್ಥಳದಲ್ಲಿ ಕೆಲ ಕಾಲ ಗೊಂದಲದ ಪರಿಸ್ಥಿತಿ ಉಂಟಾಗಿತ್ತು. ಈ ಕಾರ್ಯಕ್ರಮ ದೆಹಲಿಯ ಗಾಂಧಿನಗರದಲ್ಲಿ ನಡೆದಿತ್ತು.
ಕಾರ್ಯಕ್ರಮದ ವೇದಿಕೆಯಲ್ಲಿ ರೇಖಾ ಗುಪ್ತ ಅವರೊಂದಿಗೆ ಗಾಂಧಿನಗರ ಶಾಸಕ ಅರವಿಂದ್ ಸಿಂಗ್ ಲವ್ಲಿ ಕೂಡ ಉಪಸ್ಥಿತರಿದ್ದರು. ಘೋಷಣೆ ಕೂಗಿದ ವ್ಯಕ್ತಿಯನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರ್ಯಕ್ರಮದಲ್ಲಿದ್ದ ವ್ಯಕ್ತಿಯೊಬ್ಬರು ಸ್ಥಳೀಯ ವ್ಯಾಪಾರಿಗಳೊಂದಿಗೆ ನಡೆದ ತೀವ್ರ ವಾಗ್ವಾದದ ನಂತರ ಮುಖ್ಯಮಂತ್ರಿಯ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳದಂತೆ ತಡೆಯಲು ಪೊಲೀಸ್ ಸಿಬ್ಬಂದಿ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿ ವ್ಯಕ್ತಿಯನ್ನು ಸ್ಥಳದಿಂದ ಹೊರಗೆ ಕರೆದೊಯ್ದರು.
ಕಳೆದ ಬುಧವಾರ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಬುಧವಾರ ಬೆಳಿಗ್ಗೆ ಅವರ ನಿವಾಸದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯುತ್ತಿದ್ದಾಗ ಹಲ್ಲೆ ನಡೆದಿತ್ತು.