ಬೆಂಗಳೂರಿನಲ್ಲಿ ನಲ್ವತ್ತೈದೇ ದಿನಗಳಲ್ಲಿ ಎದ್ದು ನಿಂತ ಈ ಕಟ್ಟಡದಲ್ಲಿ ನಡೆಯಲಿದೆ ರಕ್ಷಣಾ ಸಂಬಂಧಿ ಸಂಶೋಧನೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಯಾವುದೋ ಕಟ್ಟಡ ಅಥವಾ ಯೋಜನೆ ಶುರುವಾಗಿ ದಶಕಗಳು ಕಳೆದರೂ ನೆನೆಗುದಿಗೆ ಬಿದ್ದ ಎಷ್ಟೋ ಉದಾಹರಣೆಗಳು ಕಣ್ಣಮುಂದಿವೆ. ಆದರೆ ಇಲ್ಲೊಂದು ಕಟ್ಟಡ ಕೇವಲ 45 ದಿನಗಳಲ್ಲಿ ಪೂರ್ಣಗೊಂಡಿದ್ದು, ಇಂದು ಕೇಂದ್ರ ರಕ್ಷಣಾ ಸಚಿವರಿಂದ ಉದ್ಘಾಟನೆಯೂ ಆಗಿದೆ.

ಈ ದಾಖಲೆಯ ಅವಧಿಯಲ್ಲಿ ಕಟ್ಟಡ ಕಟ್ಟಿದ್ದು ವಿದೇಶದಲ್ಲೆಲ್ಲೂ ಅಲ್ಲ, ಕರ್ನಾಟಕದ ಬೆಂಗಳೂರಿನಲ್ಲಿ. ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ದಾಖಲೆಯ 45 ದಿನಗಳಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸಿದೆ. ಇನ್-ಹೌಸ್ ಡೆವಲಪ್ಡ್ ಹೈಬ್ರಿಡ್ ಟೆಕ್ನಾಲಜಿ ಇದನ್ನು 5ನೇ ತಲೆಮಾರಿನ ಸುಧಾರಿತ ಮಧ್ಯಮ ಯುದ್ಧ ವಿಮಾನದ (ಎಎಂಸಿಎ) ಸ್ಥಳೀಯ ಅಭಿವೃದ್ಧಿಗಾಗಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್-ಡಿ) ಸೌಲಭ್ಯಗಳಾಗಿ ಬಳಸಲಾಗುತ್ತದೆ.

ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್‌ನಲ್ಲಿ (ಎಡಿಇ) ಫ್ಲೈಟ್ ಕಂಟ್ರೋಲ್ ಸಿಸ್ಟಮ್ (ಎಫ್.ಸಿ.ಎಸ್.) ಸಂಕೀರ್ಣವು 1.3 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದು ಸಾಂಪ್ರದಾಯಿಕ, ಪೂರ್ವ-ಇಂಜಿನಿಯರಿಂಗ್ ಮತ್ತು ಪ್ರಿಕಾಸ್ಟ್ ವಿಧಾನವಿರುವ ಆಂತರಿಕ ಅಭಿವೃದ್ಧಿ ಹೊಂದಿದ ಹೈಬ್ರಿಡ್ ತಂತ್ರಜ್ಞಾನ ಒಳಗೊಂಡಿದೆ. ಎಡಿಇ ಬೆಂಗಳೂರು ಕೈಗೊಂಡಿರುವ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ)ಗಾಗಿ ಫೈಟರ್ ಏರ್ ಕ್ರಾಫ್ಟ್ ಗಳಿಗೆ ಏವಿಯಾನಿಕ್ಸ್ ಮತ್ತು ಫ್ಲೈಟ್ ಕಂಟ್ರೋಲ್ ಸಿಸ್ಟಮ್ ಅಭಿವೃದ್ಧಿಪಡಿಸುವ ಸಂಶೋಧನಾ ಚಟುವಟಿಕೆಗಳನ್ನು ಬೆಂಬಲಿಸಲು ಅಗತ್ಯ ಅತ್ಯಾಧುನಿಕತೆಯನ್ನು ಒದಗಿಸಲು ನಿರ್ಧರಿಸಲಾಗಿದೆ.


ನಿರ್ಮಾಣ ಇತಿಹಾಸದಲ್ಲಿ ದಾಖಲೆ
ಈ ಯೋಜನೆಗೆ ಕಳೆದ ವರ್ಷ ನವೆಂಬರ್ 22ರಂದು ಶಂಕುಸ್ಥಾಪನೆ ಮಾಡಲಾಯಿತು. ಆದರೆ ನಿಜವಾದ ನಿರ್ಮಾಣವು ಈ ವರ್ಷ ಫೆಬ್ರವರಿ 1ರಿಂದ ಪ್ರಾರಂಭವಾಯಿತು. ಇದು ಹೈಬ್ರಿಡ್ ನಿರ್ಮಾಣ ತಂತ್ರಜ್ಞಾನದೊಂದಿಗೆ ಏಳು ಅಂತಸ್ತಿನ ಶಾಶ್ವತ ಕಟ್ಟಡವನ್ನು ಪೂರ್ಣಗೊಳಿಸಿದ ವಿಶಿಷ್ಟ ದಾಖಲೆಯಾಗಿದೆ. ಮೊದಲ ಬಾರಿ ದೇಶದ ನಿರ್ಮಾಣ ಉದ್ಯಮದ ಇತಿಹಾಸದಲ್ಲಿ ಇದು ದಾಖಲಾರ್ಹವಾಗಿದೆ.
ಹೈಬ್ರಿಡ್ ಕನ್ಸ್ಟ್ರಕ್ಷನ್ ಟೆಕ್ನಾಲಜಿಯಲ್ಲಿ ರಚನಾತ್ಮಕ ಚೌಕಟ್ಟನ್ನು ಉಕ್ಕಿನ ಫಲಕಗಳಿಂದ ನಿರ್ಮಿಸಲಾಗಿದೆ. ಭೀಮ್‌ಗಳು ಟೊಳ್ಳಾದ ಉಕ್ಕಿನ ಕೊಳವೆಯಾಕಾರದ ಭಾಗಗಳನ್ನು ಹೊಂದಿವೆ. ಅವುಗಳಲ್ಲಿ ಕಾಂಕ್ರಿಟ್ ತುಂಬಿಸಲಾಗಿದೆ. ಚಪ್ಪಡಿ(ಸ್ಲಾಬ್)ಗಳು ಭಾಗಶಃ ರೆಡಿಮೇಡ್ ಆಗಿದ್ದು, ಅವುಗಳನ್ನು ಸೈಟ್‌ಗೆ ತರಿಸಿ ಜೋಡಿಸಲಾಗಿದೆ. ಏಕಕಾಲದಲ್ಲಿ ಜೋಡಣೆ ಮತ್ತು ಕಾಂಕ್ರಿಟ್ ಎರಕ ಹೊಯ್ಯುವ ಕೆಲಸವನ್ನು ಮಾಡಲಾಗಿದೆ. ಕಾಂಕ್ರಿಟ್ ತುಂಬಿದ ಟೊಳ್ಳಾದ ಉಕ್ಕಿನ ಭೀಮ್‌ಗಳು ಶಾಶ್ವತ ಚೌಕಟ್ಟನ್ನು ಒದಗಿಸುತ್ತವೆ. ಇದು ಸಾಂಪ್ರದಾಯಿಕ ನಿರ್ಮಾಣಕ್ಕೆ ಹೋಲಿಸಿದರೆ ಸಮಯ ಮತ್ತು ಶ್ರಮವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಅತ್ಯಾಧುನಿಕ ಕಟ್ಟಡವು ವಿಆರ್‌ಎಫ್ ಹವಾನಿಯಂತ್ರಣ ವ್ಯವಸ್ಥೆಯೊಂದಿಗೆ ವಿದ್ಯುತ್ ವ್ಯವಸ್ಥೆ ಮತ್ತು ಗುಣಮಟ್ಟದ ರಾಷ್ಟ್ರೀಯ ಕಟ್ಟಡ ಸಂಹಿತೆಯ ಪ್ರಕಾರ ಅಗ್ನಿಶಾಮಕ ರಕ್ಷಣೆಯನ್ನೂ ಹೊಂದಿದೆ. ಸಂಬಂಧಿತ ಐಎಸ್ ಕೋಡ್‌ಗಳು ಮತ್ತು ಸಂಬಂಧಿತ ಕೋಡ್‌ಗಳ ಪ್ರಕಾರ ಎಲ್ಲಾ ರಚನಾತ್ಮಕ ವಿನ್ಯಾಸ ಮಾನದಂಡಗಳನ್ನು ಅನುಸರಿಸಲಾಗಿದೆ. ಐಐಟಿ ಮದ್ರಾಸ್ ಮತ್ತು ಐಐಟಿ ರೂರ್ಕಿ ತಂಡಗಳು ವಿನ್ಯಾಸ ಪರಿಶೀಲನೆ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸಿವೆ.

ಬೆಂಗಳೂರಿನ ನ್ಯೂ ತಿಪ್ಪಸಂದ್ರದಲ್ಲಿ ನೂತನ ತಂತ್ರಜ್ಞಾನದಿಂದ ನಿರ್ಮಿಸಿದ ಈ ಕಟ್ಟಡವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಉದ್ಘಾಟಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಪಿ.ಸಿ. ಮೋಹನ್ ಸಹಿತ ಡಿಆರ್‌ಡಿಒ ಮತ್ತು ಎಡಿಇ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!