ಹಿಜಾಬ್ ತೀರ್ಪು: ಮಧ್ಯಂತರ ಆದೇಶದ ಮೊದಲು ಪರೀಕ್ಷೆ ತಪ್ಪಿಸಿಕೊಂಡರಷ್ಟೇ ಇನ್ನೊಮ್ಮೆ ಪರೀಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಹಿಜಾಬ್ ಸಂಬಂಧ ಹೈಕೋರ್ಟ್‌ನ ಮಧ್ಯಂತರ ಆದೇಶಕ್ಕೂ ಮೊದಲು ಪರೀಕ್ಷೆಗಳನ್ನು ತಪ್ಪಿಸಿಕೊಂಡವರಿಗೆ ಮತ್ತೊಮ್ಮೆ ಪರೀಕ್ಷೆಗಳನ್ನು ನಡೆಸಬಹುದು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧು ಸ್ವಾಮಿ ಹೇಳಿದ್ದಾರೆ.
ಅವರು ಗುರುವಾರ ವಿಧಾನಸಭಾ ಅಧಿವೇಶನದಲ್ಲಿ ಶೂನ್ಯವೇಳೆಯಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಶಾಸಕ ಭಟ್ ವಿಷಯ ಪ್ರಸ್ತಾಪಿಸಿ, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಬಗ್ಗೆ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ಈ ಹಿಂದೆ ಮಧ್ಯಂತರ ಆದೇಶ ನೀಡಿತ್ತು. ಇದರಿಂದ ವಿದ್ಯಾರ್ಥಿಗಳು ಗೊಂದಲದಲ್ಲಿದ್ದರು. ಕೆಲವರು ಪ್ರ್ಯಾಕ್ಟಿಕಲ್ ಎಕ್ಸಾಂ ಮತ್ತು ಇನ್ನು ಕೆಲವರು ಪರೀಕ್ಷೆಗಳಿಗೆ ಹಾಜರಾಗಲಿಲ್ಲ. ಹೈಕೋರ್ಟ್ ಅಂತಿಮ ಆದೇಶ ಆಗುವವರೆಗೆ ಯಾರೆಲ್ಲ ಪರೀಕ್ಷೆಗಳಲ್ಲಿ ಭಾಗವಹಿಸಲಿಲ್ಲ, ಅವರಿಗೆ ಹೈಕೋರ್ಟ್ ಆದೇಶದ ಪ್ರಕಾರ ಹಿಜಾಬ್ ಇಲ್ಲದೇ ವಿಶೇಷ ಪರೀಕ್ಷೆ ನಡೆಸಬೇಕು. ಹಿಂದೆ ಅವರು ಗೊಂದಲದಿಂದ ಹೋಗದೇ ಇರಬಹುದು, ಆ ಕಾರಣಕ್ಕೆ ಹಿಜಾಬ್ ತೆಗೆದು ಹೋಗುವವರಿಗೆ ಮಾತ್ರ ಒಂದು ಅವಕಾಶ ಕೊಡಬೇಕು ಎಂದು ಕೋರಿದರು.
ಇದೇ ವೇಳೆ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗುವ ಅವಕಾಶವಿದೆ, ಆದರೂ ತೀರ್ಪು ಬಂದ ನಂತರವೂ ಪ್ರತಿಭಟನೆ ನಡೆಸಿ, ಕಾಲೇಜು ವಾತಾವರಣವನ್ನು ಕೆಡಿಸುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ರಘುಪತಿ ಭಟ್ ಆಗ್ರಹಿಸಿದರು.

ನ್ಯಾಯಾಯದ ತೀರ್ಪು ಧಿಕ್ಕರಿಸುವಂತಿಲ್ಲ:
ಇದಕ್ಕುತ್ತರಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ, ನಮಗೆ ಕಾನೂನಿನ ತೊಡಕು ಇದೆ. ಕೋರ್ಟ್ ಏನಾದರೂ ತೀರ್ಮಾನ ಕೊಟ್ಟರೆ, ಅದರ ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ಸರಕಾರ ಪಾಲನೆ ಮಾಡಬೇಕು. 2-3 ಸಲ ಇಂಥ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿತ್ತು. ಒಮ್ಮೆ ಕಾವೇರಿ ವಿಚಾರದಲ್ಲಿ ನಮ್ಮ ವಿರುದ್ಧ ತೀರ್ಪು ಬಂದಾಗ, ಇನ್ನೊಮ್ಮೆ ವೀರಪ್ಪನ್ ರಾಜ್‌ಕುಮಾರ್ ಅವರನ್ನು ಕಿಡ್ನಾಪ್ ಮಾಡಿ ಒತ್ತೆ ಇಟ್ಟಾಗ ಇಂತಹ ಸಂದರ್ಭ ಸೃಷ್ಟಿಯಾಗಿತ್ತು. ಇಲ್ಲಿ ಅಂದ್ರೆ ಹಿಜಾಬ್ ವಿಚಾರದಲ್ಲಿ ಈಗ ಕೋರ್ಟ್ ತೀರ್ಪು ಬಂದಿದೆ. ಮೇಲ್ಮನವಿ ಸಲ್ಲಿಕೆಯಾಗಿರುವುದರಿಂದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಬರುವ ತನಕ ಸರಕಾರ ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು.

ಮಧ್ಯಂತರ ಆದೇಶ ಉಲ್ಲಂಘನೆಯೂ ನಿಂದನೆಯೇ:
ಹಿಜಾಬ್ ವಿವಾದ ತಾರಕಕ್ಕೇರಿದಾಗ ಮಕ್ಕಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಮಧ್ಯಂತರ ಆದೇಶ ಬಂದ ನಂತರವೂ ಅದನ್ನೇ ಮುಂದುವರಿಸಿದರೆ ಅದು ಕೂಡ ನ್ಯಾಯಾಂಗ ನಿಂದನೆಯೇ ಆಗುತ್ತದೆ. ಮಧ್ಯಂತರ ಆದೇಶವನ್ನು ನಾನು ತಿರಸ್ಕಾರ ಮಾಡಿದ್ದೇನೆ, ಮತ್ತೆ ಪರೀಕ್ಷೆ ಕೊಡಿ ಎಂದರೆ ಅದಕ್ಕೆ ಅವಕಾಶ ನೀಡುವುದು ಹೇಗೆ? ಕೋರ್ಟ್ ಆದೇಶವನ್ನು ಮೀರಿ ನಡೆಯುವುದರಿಂದ ಸರಕಾರ ನಡೆಸುವುದು ಕಷ್ಟವಾಗುತ್ತದೆ. ಈಗ ಅಂತಿಮ ತೀರ್ಪು ಕೂಡ ಬಂದಿದೆ. ಈಗಂತು ಪ್ರಶ್ನೆಯೇ ಉದ್ಭವ ಆಗುವುದಿಲ್ಲ. ಕೋರ್ಟ್ ಆದೇಶದ ನಂತರವೂ ಪರೀಕ್ಷೆ ಕೊಠಡಿ ಹತ್ತಿರ ಹೋಗಿ, ವಾಪಸ್ ಬರುವುದನ್ನು ಮಾಡಿದರೆ ಒಬ್ಬೊಬ್ಬರಿಗೆ ಅಥವಾ ಹಂತ ಹಂತವಾಗಿ ಮಕ್ಕಳಿಗೆ ಪರೀಕ್ಷೆ ನಡೆಸಲು ಸರಕಾರಕ್ಕೆ ಆಗುತ್ತಾ? ಪರೀಕ್ಷೆ ನಡೆಸಬೇಕು, ಅದರ ಮೌಲ್ಯ ಮಾಪನ ಮಾಡಬೇಕು. ಇಷ್ಟೆಲ್ಲ ಸಮಸ್ಯೆಗಳಿರುತ್ತವೆ. ಆದ್ದರಿಂದ ಹೈಕೋರ್ಟ್ ಮಧ್ಯಂತರ ಆದೇಶದ ಮೊದಲು ಏನಾದರೂ ಮಕ್ಕಳು ಪರೀಕ್ಷೆ ತಪ್ಪಿಸಿಕೊಂಡರೆ ಅವರಿಗೆ ವಿಶೇಷ ಪರೀಕ್ಷೆ ನಡೆಸಲು ಅವಕಾಶ ಮಾಡಿ ಕೊಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತಾಡಿ, ನಿರ್ಧರಿಸಲಾಗುತ್ತದೆ ಎಂದು ಹೇಳಿದರು.
ಜೊತೆಗೆ ಕೋರ್ಟ್ ಆದೇಶವನ್ನು ವಿರೋಧಿಸಿ ಬಂದ್, ಪ್ರತಿಭಟನೆ ನಡೆಸುವುದನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಸರಕಾರ ನ್ಯಾಯಾಲಯದ ತೀರ್ಪಿನಂತೆ ಮುಂದುವರಿಯುತ್ತದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!