ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಗುಳಗಳಲೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಲಾರಿ ರಸ್ತೆ ಬದಿಯ ಕ್ಯಾಂಟಿನ್‌ಗೆ ನುಗ್ಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಾಳ್ಳುಪೇಟೆಯ ತೌಫಿಕ್ (27) ಮತ್ತು ಚಿತ್ರದುರ್ಗ ಜಿಲ್ಲೆ ಹೊಸಪೇಟೆ ತಾಲೂಕಿನ ಬಗ್ನಾರೆಡ್ಡಿ ಗ್ರಾಮದ ಈರೇಶ್ (60) ಮೃತರು. ಹಾಸನದಿಂದ ಮಂಗಳೂರಿಗೆ ಸರಕು ಸಮೇತ ತೆರಳುತ್ತಿದ್ದ ವಿಆರ್‌ಎಲ್ ಲಾಜಿಸ್ಟಿಕ್ ಟ್ರಕ್ ಅತಿವೇಗದಲ್ಲಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮಹಮ್ಮದ್ ಖಾದರ್ ಕ್ಯಾಂಟೀನ್‌ಗೆ ಡಿಕ್ಕಿ ಹೊಡೆದಿದೆ.
ಕ್ಯಾಂಟಿನ್ ಬಳಿ ಹತ್ತಾರು ಮಂದಿ ಟೀ ಕುಡಿಯುತ್ತಿದ್ದು, ಇವರಲ್ಲಿ ಜೆಜೆಎಂ ಕೆಲಸ ಮಾಡಲು ಬಂದಿದ್ದ ವೀರೇಶ್ ಹಾಗೂ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ತೌಫಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟೀ ಅಂಗಡಿ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳು ಸಂಪೂರ್ಣ ಜಖಂಗೊಂಡಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.