ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಗೆ ಆಹಾರ ಅರಸಿ ಬಂದ ಚಿರತೆ ಸಂಸದರ ಮನೆಯ ಸಾಕುನಾಯಿಯನ್ನು ಅಟ್ಟಿಸಿಕೊಂಡು ಹೋಗಿದೆ.
ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ತಾಲೂಕಿನ ಕಾಗೇರಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಹಾಗೂ ಕುಟುಂಬಸ್ಥರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇದೇ ವೇಳೆ ಚಿರತೆ ಮನೆಯ ಮುಂದಿದ್ದ ನಾಯಿಯ ಮೇಲೆ ದಾಳಿ ಮಾಡಿ ಅಟ್ಟಾಡಿಸಿಕೊಂಡು ಹೋಗಿದೆ. ಅದೃಷ್ಟವಶಾತ್ ನಾಯಿ ಚಿರತೆ ದಾಳಿಯಿಂದ ಪಾರಾಗಿದೆ. ರಾತ್ರಿ ವೇಳೆ ನಾಯಿ ಬೊಗಳುತ್ತಿದ್ದರಿಂದ ಇಂದು ಬೆಳಗ್ಗೆ ಮನೆಯವರು ಸಿಸಿಟಿವಿ ದೃಶ್ಯ ವೀಕ್ಷಿಸಿದಾಗ ಚಿರತೆ ಮನೆಗೆ ಬಂದ ವಿಷಯ ತಿಳಿದಿದೆ.
ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ಲಭಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.