ಹೊಸದಿಗಂತ ಡಿಜಿಟಲ್ ಡೆಸ್ಕ್:
ʻಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಪಾಕಿಸ್ತಾನ ಭಯೋತ್ಪಾದನೆ ಬಗ್ಗೆ ವಾಸ್ತವಾಂಶ ವಿವರಿಸಲು ಡಿಎಂಕೆ ಕನಿಮೋಳಿ ನೇತೃತ್ವದ ಸರ್ವಪಕ್ಷಗಳ ನಿಯೋಗವು ರಷ್ಯಾಕ್ಕೆ ತೆರಳಿದ್ದು, ಇತ್ತ ಭಾರತದ ನಿಯೋಗ ತೆರಳುತ್ತಿದ್ದ ಹೊತ್ತಿನಲ್ಲೇ ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ನಡೆದಿದೆ.
ಭಾರತೀಯ ಸಂಸದರ ನಿಯೋಗವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ. ಈ ವಿಮಾನದಲ್ಲಿ ಡಿಎಂಕೆ ಸಂಸದೆ ಕನಿಮೋಳಿ ಇದ್ದರು. ಡ್ರೋನ್ ದಾಳಿಯಿಂದಾಗಿ, ಈ ವಿಮಾನವು ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಹಲವಾರು ಗಂಟೆಗಳ ಕಾಲ ಸುತ್ತುತ್ತಲೇ ಇತ್ತು.ಹಲವಾರು ಗಂಟೆಗಳ ವಿಳಂಬ ಮತ್ತು ಭದ್ರತಾ ಪರಿಸ್ಥಿತಿಗಳ ಮೌಲ್ಯಮಾಪನದ ನಂತರ, ವಿಮಾನವು ಅಂತಿಮವಾಗಿ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕಳೆದ 3 ವರ್ಷಗಳಿಂದ ನಡೆಯುತ್ತಿದೆ. ಉಭಯ ರಾಷ್ಟ್ರಗಳು ಪದೇ ಪದೇ ಡ್ರೋನ್‌ಗಳನ್ನು ಬಳಸಿ ಪರಸ್ಪರ ದಾಳಿ ಮಾಡುತ್ತಿವೆ. ಆದ್ರೆ ಇಷ್ಟು ದಿನ ಮಾಸ್ಕೋ ಮೇಲೆ ಡ್ರೋನ್ ದಾಳಿಗಳು ಅಪರೂಪವಾಗಿತ್ತು. ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನ್‌ನ 112 ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಇದರಲ್ಲಿ 24 ಡ್ರೋನ್‌ಗಳು ರಾಜಧಾನಿಯ ಕಡೆಗೆ ಬರುತ್ತಿದ್ದವು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಭಾರತದಿಂದ ರಷ್ಯಾಕ್ಕೆ ತೆರಳಿರುವ ನಿಯೋಗದಲ್ಲಿ ಡಿಎಂಕೆ ಸಂಸದೆ ಕನ್ನಿಮೋಳಿ, ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ, ಆರ್‌ಜೆಡಿ ಸಂಸದ ಪ್ರೇಮಚಂದ್ ಗುಪ್ತಾ, ಕ್ಯಾಪ್ಟನ್ ಬ್ರಿಜೇಶ್, ಅಶೋಕ್ ಕುಮಾರ್ ಮಿತ್ತಲ್ ಮತ್ತು ರಾಯಭಾರಿ ಮಂಜೀವ್ ಸಿಂಗ್ ಪುರಿ ಸೇರಿದ್ದಾರೆ.