ಡ್ರೋನ್‌ ದಾಳಿ: ವಿಕ್ರಮ್‌ನ ಬೆಂಗಾವಲಿನಲ್ಲಿ ಮುಂಬೈ ತಲುಪಿದ ಪ್ಲುಟೊ ಹಡಗು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೌದಿ ಅರೇಬಿಯಾದಿಂದ ಬರುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ನಡೆದಿರುವ ಶಂಕಿತ ಡ್ರೋನ್‌ ದಾಳಿಗೆ ಸಂಬಂಧಿಸಿ ಭಾರತೀಯ ನೌಕಾಪಡೆಯು ತನಿಖೆಯನ್ನು ತೀವ್ರಗೊಳಿಸಿದೆ.

ಭಾರತೀಯ ಕರಾವಳಿ ಕಾವಲು ಪಡೆಯ ನೌಕೆ ಐಸಿಜಿಎಸ್‌ ವಿಕ್ರಮ್‌ನ ಬೆಂಗಾವಲಿನಲ್ಲಿ ಎಂವಿ ಚೆಮ್‌ ಪ್ಲುಟೊ ಹಡಗನ್ನು ಇಂದು ಮಧ್ಯಾಹ್ನ 3 ಗಂಟೆಗೆ ಮುಂಬೈಗೆ ತರಲಾಗಿದೆ.

ಕರಾವಳಿ ಕಾವಲು ಪಡೆಯ ಕಾರ್ಯನಿರ್ವಹಣಾ ಕೇಂದ್ರವು ಈ ಕುರಿತು ನಿಗಾವಹಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಡಗಿನಲ್ಲಿರುವ ಸರಕುಗಳನ್ನು ಮತ್ತೊಂದು ಹಡಗಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಭಾರತೀಯ ನೌಕಾಪಡೆ, ಗುಪ್ತಚರ ಸಂಸ್ಥೆಗಳು ಮತ್ತು ಇತರ ಅಧಿಕಾರಿಗಳು ಹಡಗಿನ ಮೇಲೆ ನಡೆದಿರುವ ದಾಳಿಯ ಬಗ್ಗೆ ಜಂಟಿ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಜರಾತ್‌ನ ವೆರಾವಲ್‌ ಕರಾವಳಿಯಿಂದ 200 ನಾಟಿಕಲ್‌ ಮೈಲಿ ದೂರದಲ್ಲಿ ಮಂಗಳೂರಿಗೆ ಕಚ್ಚಾ ತೈಲ ಹೊತ್ತುತರುತ್ತಿದ್ದ ಹಡಗಿನಲ್ಲಿ ಶನಿವಾರ ಸ್ಫೋಟ ಸಂಭವಿಸಿತ್ತು. ಡ್ರೋನ್‌ ದಾಳಿಯೇ ಈ ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾಗಿತ್ತು.

ಡ್ರೋನ್‌ ದಾಳಿಯನ್ನು ಎಲ್ಲಿಂದ ಮಾಡಲಾಗಿದೆ ಎಂಬುದನ್ನೂ ಸೇರಿ ಸಂಪೂರ್ಣ ಘಟನೆ ಕುರಿತು ನೌಕಾಪಡೆ ತನಿಖೆ ನಡೆಸುತ್ತಿದ್ದು, ದಾಳಿ ನಡೆದ ಸ್ಥಳಕ್ಕೆ ಕ್ಷಿಪಣಿ ಧ್ವಂಸಕ ಯುದ್ಧನೌಕೆ ಐಎನ್‌ಎಸ್‌ ಮುರ್ಮುಗೋವಾ ಅನ್ನು ಕಳಿಸಲಾಗಿದೆ. ದಾಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!