ಹೊಸ ದಿಗಂತ ವರದಿ, ಬನವಾಸಿ:
ಅಪರಿಚಿತ ವ್ಯಕ್ತಿಯೊಬ್ಬ ಡ್ರಾಪ್ ಕೊಡುವುದಾಗಿ ನಂಬಿಸಿ ಮಹಿಳೆಯನ್ನು ಬೈಕ್ ಮೇಲೆ ಹತ್ತಿಸಿಕೊಂಡು ನಿರ್ಜನ ಪ್ರದೇಶದಲ್ಲಿ ಆಕೆಯ ಕೈಲಿದ್ದ ಹಣ ಮತ್ತು ಬಂಗಾರ ದೋಚಿದ ಘಟನೆ ಸಮೀಪದ ಕುಪಗಡ್ಡೆಯಲ್ಲಿ ಸೋಮವಾರ ನಡೆದಿದೆ.
ರಂಗಾಪುರದ ಕಮಲಮ್ಮ ನಾಗಪ್ಪ ಹೋಂಬಳಿ ಹಣ ಮತ್ತು ಬಂಗಾರ ಕಳೆದುಕೊಂಡ ಮಹಿಳೆಯಾಗಿದ್ದಾಳೆ. ಭತ್ತ ಮಾರಾಟ ಮಾಡಿದ ಹಣವನ್ನು ಹೊಸಕೊಪ್ಪದ ಮಗಳಿಗೆ ಕೊಟ್ಟು ಬರುವ ಸಲುವಾಗಿ ಇವರು ದಾಸನಕೊಪ್ಪದಲ್ಲಿ ಬಸ್ ಕಾಯುತ್ತ ನಿಂತಿದ್ದರು.
ಈ ವೇಳೆ ಆಗಮಿಸಿದ ಅಪರಿಚಿತ ವ್ಯಕ್ತಿ ತಾನು ಹೊಸಕೊಪ್ಪ ಕಡೆಯೇ ತೆರಳುತ್ತಿರುವುದಾಗಿ ನಂಬಿಸಿ ಆಕೆಯನ್ನು ಬೈಕ್ ಮೇಲೆ ಕರೆದೊಯ್ದಿದ್ದಾನೆ.
ಕುಪಗಡ್ಡೆ ಬಳಿ ಬೈಕ್ ನಿಲ್ಲಿಸಿ ಆಕೆಯ ಮೇಲೆ ಹಲ್ಲೆ ನಡೆಸಿ ಬಾಯಿಗೆ ಬಟ್ಟೆ ತುರುಕಿದ್ದಾನೆ. ಕೈಲಿದ್ದ 57 ಸಾವಿರ ರೂ., ಧರಿಸಿದ್ದ 40 ಸಾವಿರ ರೂ. ಬಂಗಾರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.