October 5, 2026
Monday, October 5, 2026
spot_img

ಬರದಿಂದಾಗಿ ಈ ಬಾರಿ 46 ಸಾವಿರ ಕೋಟಿ ನಷ್ಟ, ಜಿಎಸ್‌ಟಿ ಸಂಗ್ರಹವೂ ಕುಸಿತ: ಜಿ. ಪರಮೇಶ್ವರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಬಾರಿ ಸಂಭವಿಸಿರುವ ಬರ ಪರಿಸ್ಥಿತಿಯಿಂದಾಗಿ 46 ಸಾವಿರ ಕೋಟಿ ನಷ್ಟವಾಗಿದೆ. ಜೊತೆಗೆ ಈ ವರ್ಷ ಜಿಎಸ್‌ಟಿ ಸಂಗ್ರಹದಲ್ಲಿಯೂ ಕುಸಿತ ಕಂಡಿದೆ ಎಂದು ಡಿಸಿಎಂ ಜಿ. ಪರಮೇಶ್ವರ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿ, ಕೇಂದ್ರದ ಬರ ಅಧ್ಯಯನ ತಂಡ ರಾಜ್ಯದಲ್ಲಿ ಪರಿಶೀಲನೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ರಾಜ್ಯಕ್ಕೆ ಪರಿಹಾರ ಬಿಡುಗಡೆ ಮಾಡಲಾಗುತ್ತದೆ. ಕೇಂದ್ರದ ತಂಡವನ್ನು ಮೂರು ತಂಡಗಳಾಗಿ ವಿಂಗಡಿಸಿ ರಾಜ್ಯದಲ್ಲಿ ಅಧ್ಯಯನ ನಡೆಸಲಾಗುತ್ತಿದೆ. ಅಕ್ಟೋಬರ್ 3ರಿಂದ 6ರವರೆಗೆ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿವೆ. ಪ್ರತಿಯೊಂದು ತಂಡವೂ ಮೂರರಿಂದ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ನಾವು ಮೊದಲನೇ ಪಟ್ಟಿಯಲ್ಲಿ ಬರಪೀಡಿತ ಎಂದು ಘೋಷಿಸಿದ್ದ 101 ತಾಲೂಕುಗಳ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದ 177 ತಾಲೂಕುಗಳಲ್ಲಿ ಈಗಾಗಲೇ ಸುಮಾರು 46 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. ಇದರಲ್ಲಿ ಸುಮಾರು 10 ಸಾವಿರದಿಂದ 11 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ನಾವು ಮನವಿ ಮಾಡಿದ್ದೇವೆ. ಕೇಂದ್ರ ತಂಡದವರಿಗೂ ಈ ಕುರಿತು ಮನವಿ ಮಾಡಿದ್ದೇವೆ. ಕೇಂದ್ರಕ್ಕೆ ಅಂತಿಮವಾಗಿ ಮೆಮೊರಾಂಡಮ್ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮತ್ತು ನಾನು ಒಂದು ನಿಯೋಗದೊಂದಿಗೆ ತೆರಳಬೇಕು ಎಂಬ ಯೋಚನೆ ಮಾಡಿದ್ದೇವೆ. ನಿಯೋಗ ತೆರಳಿದಾಗಲೂ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳುತ್ತೇವೆ ಎಂದು ತಿಳಿಸಿದರು.

ಚುನಾವಣಾ ಆಯೋಗಕ್ಕೆ ಎನ್‌ಡಿಎ ನಾಯಕರು ದೂರು ಕೊಡಲಿ. ಅದರ ಜೊತೆಗೆ ನಾವು ಕೊಟ್ಟ ದೂರಿನ ಮೇಲೆ ಚುನಾವಣೆ ಆಯೋಗ ಎಫ್‌ಐಆರ್ ದಾಖಲು ಮಾಡಬೇಕು ಅಂತ ಡಿಸಿಎಂ ಪರಮೇಶ್ವರ್ ಆಗ್ರಹಿಸಿದ್ದಾರೆ. ಫಾರಂ-7 ದುರುಪಯೋಗದ ಕುರಿತು ಎನ್‌ಡಿಎ ಯಿಂದ ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನ ಬಗ್ಗೆ ಮಾತನಾಡಿ, ಆಯೋಗದವರು ತಮ್ಮ ಕೆಲಸ ಮಾಡುತ್ತಾರೆ, ನಾವು ನಮ್ಮ ಕೆಲಸ ಮಾಡುತ್ತೇವೆ. ನಾವು ಸಾಕ್ಷಿ ಸಹಿತ ದೂರು ನೀಡಿದ್ದೇವೆ. ಫಾರಂ ನಂಬರ್ 7 ಅನ್ನು ದುರುಪಯೋಗ ಮಾಡಿಕೊಳ್ಳುತ್ತಾ ಇದ್ದದ್ದನ್ನ ರೆಡ್ ಹ್ಯಾಂಡಾಗಿ ನಾವು ಹಿಡ್ಕೊಂಡು ಅದನ್ನ ಕೊಟ್ಟಿದ್ದೇವೆ. ಒಬ್ಬ ವ್ಯಕ್ತಿ ಎಷ್ಟು ಫಾರಂ ನಂಬರ್-7 ಸಲ್ಲಿಸಬಹುದು? ಅದಕ್ಕೆ ಇತಿಮಿತಿ ಇಲ್ಲವೇ? ಒಬ್ಬರೇ 100, 200, 400 ಅರ್ಜಿಗಳನ್ನ ಸಲ್ಲಿಸಿದರೆ ಅದು ಯಾವ ರೀತಿ ಸಾಧ್ಯ? ಎಂದು ಪ್ರಶ್ನಿಸಿದರು.

Must Read