ಬರ ಪರಿಹಾರ ವಿಚಾರ: ಚುನಾವಣೆ ಆಯೋಗದ ಮೆಟ್ಟಿಲೇರಿದ ಕಾಂಗ್ರೆಸ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಚುನಾವಣೆ ಆಯೋಗದ ಮೆಟ್ಟಿಲೇರಿದೆ.

ಬರ ಪರಿಹಾರ ಬಿಡುಗಡೆಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಮಾಜಿ ಸಂಸದ ಉಗ್ರಪ್ಪ ನೇತೃತ್ವದ ನಿಯೋಗ ಇಂದು(ಏಪ್ರಿಲ್ 09) ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ತೆರಳಿ ದೂರು ನೀಡಿದ್ದು, ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಎಂದು ಕಾಂಗ್ರೆಸ್ ಆಯೋಗಕ್ಕೆ ದೂರು ನೀಡಿದೆ.

ಕಾಂಗ್ರೆಸ್ ದೂರಿನಲ್ಲೇನಿದೆ?
ಬರ ಪರಿಹಾರ ಕೊಡುವ ವಿಚಾರದಲ್ಲಿ ಚುನಾವಣಾ ಆಯೋಗದ ನೀತಿ ಸಂಹಿತೆ ಅಡ್ಡಿಯಾಗಿದೆ. ಬರ ಪರಿಹಾರ ನೀಡಲು ಹೈಪವರ್ ಕಮಿಟಿ ಸಭೆ ನಡೆಯಬೇಕು. ಸಭೆ ನಡೆಸಲು ಚುನಾವಣಾ ಆಯೋಗ ಅನುಮತಿ ನೀಡಿಲ್ಲ. ಈ ಬಗ್ಗೆ ನಾವು ಪತ್ರ ಬರೆದಿದ್ದೇವೆ. ಆದರೆ ಚುನಾವಣಾ ಆಯೋಗ ಅನುಮತಿ ನೀಡಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದ್ರೆ, ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಇದೆ. ಕಾನೂನಿನಲ್ಲಿ ಬರ ಪರಿಹಾರ ಕೊಡುವ ಅವಕಾಶ ಇದ್ದರೂ ಸಹ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೇಲೆ ಹೇಳುತ್ತಿದೆ. ಹೀಗಾಗಿ ಹೈಪವರ್ ಕಮಿಟಿ ಮೀಟಿಂಗ್ ಮಾಡಲು ಚುನಾವಣಾ ಆಯೋಗ ನಿರ್ದೇಶನ ನೀಡಬೇಕು. ಅಲ್ಲದೇ ತಕ್ಷಣವೇ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕಾಂಗ್ರೆಸ್​ ತನ್ನ ದೂರಿನಲ್ಲಿ ಮನವಿ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!