ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪುಣಚ ದೇವಿನಗರದಲ್ಲಿ ಅಮಲು ಪದಾರ್ಥ ಸೇವಿಸಿ ಹೊಡೆದಾಡುವ ಸಂದರ್ಭ ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದು, ಕೊಲೆಯನ್ನು ಸಹಜ ಸಾವೆಂದು ಬಿಂಬಿಸಲು ಯತ್ನಿಸಿದ ಪ್ರಕರಣ ಪೊಲೀಸ್ ತನಿಖೆಯಿಂದ ನೈಜತೆ ಬಹಿರಂಗವಾಗಿದೆ.
ದೇವಿನಗರ ನಿವಾಸಿ ಲೀಲಾ (45) ಮೃತಪಟ್ಟಿದ್ದಾರೆ. ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪತಿ – ಪತ್ನಿ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತಿದ್ದರೆಂದು ಹೇಳಲಾಗಿದ್ದು, ಬುಧವಾರ ರಾತ್ರಿ ಪತಿ ಸಂಜೀವ ಹಾಗೂ ಲೀಲಾ ನಡುವೆ ಮಾತಿಗೆಮಾತು ಬೆಳೆದಿದೆ. ಈ ಸಂದರ್ಭ ಸಂಜೀವ ಕಬ್ಬಿಣದ ಸಲಾಖೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಮಹಿಳೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದರು. ಗುರುವಾರ ಲೀಲಾ ಮೃತಪಟ್ಟಿದ್ದಾರೆ.
ಪುಣಚದ ಘಟಾನುಘಟಿಗಳು ಪ್ರಕರಣದ ಹಾದಿ ತಪ್ಪಿಸುವ ಯತ್ನವನ್ನು ಮಾಡಿದ್ದು, ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ವಿಟ್ಲ ಪೋಲೀಸರು ಭೇಟಿ ನೀಡಿ ತನಿಖೆ ನಡೆಸಿದಾಗ ವಿಚಾರ ಹೊರಗೆ ಬಂದಿದ್ದು, ಆರೋಪಿ ಸಂಜೀವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.