ಹೊಸದಿಗಂತ ವರದಿ ಪುತ್ತೂರು:
ಪುತ್ತೂರಿನ ಬನ್ನೂರು ಸಮೀಪದ ಜೈನರಗುರಿಯಲ್ಲಿ ಭಾರೀ ಮಳೆಯಿಂದಾಗಿ ಮನೆ ಮೇಲೆ ಧರೆ ಕುಸಿದು ಮಣ್ಣಿನಡಿ ಇಬ್ಬರು ಮಕ್ಕಳು ಸಿಲುಕಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ.
ನಸುಕಿನ ಜಾವ ನಿದ್ದೆಯಲ್ಲಿದ್ದ ಸಂದರ್ಭ ಮನೆ ಮೇಲೆ ಧರೆ ಕುಸಿತವಾಗಿದ್ದು, ಮಕ್ಕಳು ಸಿಲುಕಿಕೊಂಡಿದ್ದರು, ತಕ್ಷಣ ಮನೆಯ ಇತರ ಸದಸ್ಯರು ಮಕ್ಕಳನ್ನು ಪಾರು ಮಾಡಿದ್ದಾರೆ. ಮಜೀದ್ ಎನ್ನುವವರ ಮನೆ ಇದಾಗಿದ್ದು, ಮಣ್ಣು ಬಿದ್ದ ಪರಿಣಾಮ ಮನೆಯ ಅರ್ಧ ಭಾಗ ಕುಸಿದು ಹಾನಿಯಾಗಿದೆ.
ಮಕ್ಕಳು ಮಣ್ಣಿನಡಿ ಸಿಲುಕಿದ ತಕ್ಷಣ ತಂದೆ ಮಜೀದ್ ಮಕ್ಕಳನ್ನು ಪಾರು ಮಾಡಿದ್ದಾರೆ. ಪಕ್ಕದ ಧರೆಯೊಂದು ಸಡಿಲಗೊಂಡು ಮನೆ ಮೇಲೆ ಬಿದ್ದು ಹಾನಿಯಾಗಿದೆ. ಘಟನಾ ಸ್ಥಳಕ್ಕೆ ನಗರಸಭಾ ಅಧಿಕಾರಿಗಳು ಭೇಟಿ ನೀಡಿದ್ದು, ನಗರಸಭೆ ಮತ್ತು ಸ್ಥಳೀಯರಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.