ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಜಲ್ಲಿಕಲ್ಲು ತುಂಬಿಕೊಂಡು ಸಾಗುತ್ತಿದ್ದ ಡಂಪರ್ ಟ್ರಕ್ ಒಂದೊಂದು ಕ್ಷಣದಲ್ಲಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಉರುಳಿಬಿದ್ದ ಪರಿಣಾಮ, ಕಾರಿನಲ್ಲಿದ್ದ ಒಂದೇ ಕುಟುಂಬದ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಒಂದು ಮಗು ಕೂಡ ಸೇರಿದೆ. ಈ ದುರ್ಘಟನೆ ಸಹರಾನ್‌ಪುರನ ಗಗಲ್ಹೆಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೆಹಲಿ–ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಬಳಿ ನಡೆದಿದೆ.
ವರದಿಗಳ ಪ್ರಕಾರ ಸಯ್ಯದ್ ಮಜ್ರಾ ಗ್ರಾಮದ ನಿವಾಸಿಗಳಿದ್ದ ಕಾರು ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚರಿಸುತ್ತಿದ್ದ ವೇಳೆ ಡೇಹ್ರಾಡೂನ್ ಕಡೆಯಿಂದ ಅತಿ ವೇಗದಲ್ಲಿ ಬಂದ ಡಂಪರ್ ಕಾರಿನ ಸಮೀಪ ಬಂದಾಗ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಡಂಪರ್ ಉರುಳಿಬಿದ್ದು, ಅದರೊಳಗಿದ್ದ ಜಲ್ಲಿಕಲ್ಲುಗಳು ಕಾರಿನ ಮೇಲೆ ಬಿದ್ದಿವೆ. ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿ, ಒಳಗಿದ್ದವರು ಎಲ್ಲರೂ ಸಿಲುಕಿಕೊಂಡಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಗಂಟೆಗಳ ತನಕ ಶ್ರಮಿಸಿ ಮೂರು ಕ್ರೇನ್‌ಗಳ ಸಹಾಯದಿಂದ ಡಂಪರ್‌ನ್ನು ತೆರವುಗೊಳಿಸಿ, ಕಾರಿನ ಛಾವಣಿ ಕತ್ತರಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಈ ಭೀಕರ ಘಟನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

