ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಹ ಬಂದಾಗ ಯಾರನ್ನೂ ಕಾಯದೆ, ಯಾರನ್ನೂ ದೂರದೆ ಎರಡೆರಡು ಬಾರಿ ಪರಿಹಾರ ನೀಡಿ ನಾವು ನಮ್ಮ ಗಂಡಸ್ತನ ತೋರಿಸಿದ್ದೇವೆ. ಈಗ ಬರ ಪರಿಹಾರ ನೀಡಿ ಸಿದ್ದರಾಮಯ್ಯ ಗಂಡಸ್ತನ ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸವಾಲೆಸೆದಿದ್ದಾರೆ.
ಹಾನಗಲ್ನ ಆಡೂರು ಗ್ರಾಮದಲ್ಲಿ ಮತಯಾಚನೆ ವೇಳೆ ಮಾತಾಡಿದ ಅವರು, ಕರ್ನಾಟಕದ ಜನತೆ ಸಿದ್ದರಾಮಯ್ಯನವರನ್ನ ಅಧಿಕಾರಕ್ಕೆ ತಂದಿದ್ದಾರೆ. ಯಾರು ಅಧಿಕಾರಕ್ಕೆ ತಂದಿದ್ದಾರೋ ಅವರು ಈಗ ಕಷ್ಟದಲ್ಲಿದ್ದಾರೆ. ಸರ್ಕಾರ ಮೊದಲು ರೈತರಿಗೆ ಪರಿಹಾರ ಕೊಡಲಿ. ರೈತರಿಗೆ ಪರಿಹಾರ ಕೊಡಲು ಖಜಾನೆ ಖಾಲಿಯಾಗಿದೆ. ಈಗ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆಕೂರಿಸುತ್ತಿದ್ದಾರೆ ಎಂದರು.
ನಾವು ರಾಮನ ಹೆಸರು ಹೇಳುತ್ತೇವೆ. ರಾಮರಾಜ್ಯ ಮಾಡುತ್ತೇವೆ. ಕರ್ನಾಟಕಕ್ಕೆ ಬರುತ್ತಿರುವುದು ನರೇಂದ್ರ ಮೋದಿ ಕೊಟ್ಟಿರುವ ಅಕ್ಕಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಾಳು ಅಕ್ಕಿಯನ್ನೂ ಕೊಟ್ಟಿಲ್ಲ. ಅವರಿಗೆ ಅನ್ನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಇದೇ ಸಂದರ್ಭ ಅವರು ವಾಗ್ದಾಳಿ ನಡೆಸಿದರು.