Wednesday, July 6, 2022

Latest Posts

ಇ.ಡಿ. ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮೂರ್ಖತನದ ಪರಮಾವಧಿ : ಸಚಿವ ಬಿ.ಸಿ.ಪಾಟೀಲ್

ಹೊಸ ದಿಗಂತ ವರದಿ, ಚಿತ್ರದುರ್ಗ:

ಕಾನೂನು ಗೌರವಿಸುವುದು ಎಲ್ಲರ ಕರ್ತವ್ಯ, ರಾಹುಲ್ ಗಾಂಧಿ ಅವರನ್ನು ಇ.ಡಿ. ವಿಚಾರಣೆ ಮಾಡಿದರೆ ಕಾಂಗ್ರೆಸ್ ಪಕ್ಷದವರು ಪ್ರತಿಭಟನೆ ಮಾಡುತ್ತಾರೆಂದರೆ, ಅದು ಮೂರ್ಖತನದ ಪರಮಾವಧಿ ಎಂದು ಕೃಷಿ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದ ಬಿಜೆಪಿ ಪಕ್ಷದ ಕಛೇರಿ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ದೇಶದಲ್ಲಿ ಕಾನೂನಿಗೆ ಗೌರವ ಬೇಡವೇ? ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ತಪ್ಪು ಮಾಡಿಲ್ಲ ದೋಷ ಮುಕ್ತರಾಗುತ್ತಾರೆ. ವಿಚಾರಣೆ ಮಾಡಬಾರದು ಅಂದರೆ ಹೇಗೆ? ವಿಚಾರಣೆ ಮಾಡುವುದು ತಪ್ಪು ಅನ್ನುವುದಾದರೆ ದೇಶದಲ್ಲಿ ಸಂವಿಧಾನ, ಕಾನೂನು ಏಕೆ ಬೇಕು? ಇಷ್ಟು ಅರ್ಥ ಮಾಡಿಕೊಳ್ಳದಿದ್ದರೆ ಅವರಿಗೆ ಯಾರು ಬುದ್ಧಿ ಹೇಳಬೇಕು ಎಂದು ಕಿಡಿ ಕಾರಿದರು.
ಬ್ರಿಟಿಷರೇನಾದರೂ ಈ ರೀತಿ ಪ್ರತಿಭಟನೆ ಮಾಡಲಿಕ್ಕೆ ನಿರ್ಬಂಧ ಹೇರಿದ್ದರೆ ಹೋರಾಟನೇ ಮಾಡಲಿಕ್ಕೆ ಆಗುತ್ತಿರಲಿಲ್ಲ. ಸ್ವಾತಂತ್ರ್ಯವೂ ಸಿಗುತ್ತಿರಲಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಏನಾದರೂ ಅನ್ಯಾಯವಾದಲ್ಲಿ ಪ್ರತಿಭಟನೆ ಮಾಡಬೇಕು. ಇದು ಇತ್ತೀಚೆಗೆ ದಾಖಲಾದ ಪ್ರಕರಣವಲ್ಲ. ಬಿ.ಜೆ.ಪಿಯವರು ಪ್ರಕರಣ ದಾಖಲು ಮಾಡಿಲ್ಲ. ಸುಬ್ರಮಣ್ಯಸ್ವಾಮಿ ಪ್ರಕರಣ ದಾಖಲು ಮಾಡಿದ್ದಾರೆ. ಅದರ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಮಾಡಬಾರದು ಅಂದರೆ ಹೇಗೆ? ದೇಶದಲ್ಲಿ ಕಾನೂನು ಸುವ್ಯವಸ್ಥೆ ಉಳಿಯುತ್ತಾ? ಎಂದು ಪ್ರಶ್ನಿಸಿದರು.
ಅವರು ತಪ್ಪು ಮಾಡಿಲ್ಲ ಅಂದರೆ ಪ್ರಕರಣದಿಂದ ಹೊರ ಬರುತ್ತಾರೆ. ತಪ್ಪು ಮಾಡಿದ್ದರೆ ಶಿಕ್ಷೆಯಾಗುತ್ತೆ. ಕಾನೂನು ಪ್ರಕಾರ ಕ್ರಮಕೈಗೊಳ್ಳುವುದಕ್ಕೆ ಪ್ರತಿಭಟನೆ ಮೂಲಕ ಧಮ್ಕಿ ಹಾಕಿದರೆ ಇದು ಉದ್ಧಟತನವಾಗುತ್ತದೆ. ಪ್ರತಿಭಟನೆ ಮಾಡುವುದರಿಂದ ಸಾರ್ವಜನಿಕರ ತೊಂದರೆಯಾಗುತ್ತದೆ. ಸಾರ್ವಜನಿಕರಿಗೆ ತೊಂದರೆ ಮಾಡಲಿಕ್ಕೆ ಇವರಿಗೆ ಏನು ಅಧಿಕಾರವಿದೆ. ತಪ್ಪು ಮಾಡಿದರೆ, ಜೈಲಿಗೆ ಹೋಗುವಂತಹ ಕೆಲಸ ಮಾಡಿದರೆ ಜೈಲಿಗೆ ಹೋಗುತ್ತಾರೆ ಎಂದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, 2012 ರಲ್ಲಿ ಸುಬ್ರಮಣ್ಯಸ್ವಾಮಿ ಈ ಪ್ರಕರಣ ದಾಖಲು ಮಾಡುತ್ತಾರೆ. ಆ ಸಮಯದಲ್ಲಿ ಕೇಂದ್ರದಲ್ಲಿ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಇ.ಡಿ. ಅಧಿಕಾರಿಗಳು ಪ್ರಧಾನಮಂತ್ರಿ ಹಾಗೂ ಆಡಳಿತ ಪಕ್ಷದ ಮಾತು ಕೇಳುತ್ತಾರೆ ಎಂದಾದರೆ, ಅಂದಿನ ಪ್ರಧಾನಿ ಮನಮೋಹನ್‌ಸಿಂಗ್ ಪ್ರಕರಣ ದಾಖಲಿಸದಂತೆ ಇ.ಡಿ. ಅಧಿಕಾರಿಗಳನ್ನು ತಡೆಯಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಪ್ರಕರಣವನ್ನು ಕೈಬಿಡುವಂತೆ ಸೂಚಿಸಬಹುದಿತ್ತು. ಆದರೆ ಇ.ಡಿ. ಒಂದು ಸ್ವಾತಂತ್ರ್ಯ ಸಂಸ್ಥೆ. ಯಾವುದೇ ವ್ಯಕ್ತಿಯ ಮಾತಿನ ಮೇಲೆ ನಡೆಯುವ ಸಂಸ್ಥೆಯಲ್ಲ. ಇ.ಡಿ.ಯವರು ಬಿಜೆಪಿಯವರ ಮಾತನ್ನು ಕೇಳಿ ಕೆಲಸ ಮಾಡುತ್ತಿದ್ದಾರೆ ಎಂದು ಈಗ ಕಾಂಗ್ರೆಸ್‌ನವರು ಆರೋಪಿಸುವುದು ಸರಿಯಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss