ಹೊಸದಿಗಂತ ವರದಿ ಚಿಕ್ಕಮಗಳೂರು:
ಬೆಳ್ಳಂ ಬೆಳಗ್ಗೆ ಪೊಲೀಸರ ಗುಂಡೇಟಿನಿಂದ ರೌಡಿಶೀಟರ್ ಪೂರ್ಣೇಶ್ ಅಂಬಾತ ಗಾಯಗೊಂಡ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪೂರ್ಣೇಶ್ ವಿರುದ್ಧ 8 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 4 ಕೊಲೆ ಯತ್ನ, 3 ದೌರ್ಜನ್ಯ ಹಾಗೂ ಪೊಲೀಸರ ಮೇಲೆ ಹಲ್ಲೆ ಪ್ರಕರಣಗಳು ಒಳಗೊಂಡಿವೆ.
ಇತ್ತೀಚೆಗೆ ಬಾಳೆಹೊನ್ನೂರಿನಲ್ಲಿ ನಡೆದ ಕೊಲೆ ಪ್ರಯತ್ನ ಪ್ರಕರಣದಲ್ಲಿ ಆತ ತಲೆಮರೆಸಿಕೊಂಡಿದ್ದ. ಸೋಮವಾರ ಬೆಳಗ್ಗೆ 6 ಗಂಟೆ ವೇಳೆಗೆ ಖಚಿತ ಮಾಹಿತಿ ಮೇರೆಗೆ ಬಾಳೆಹೊನ್ನೂರು ಪಿಎಸ್ಐ ದಿಲೀಪ್ ಕುಮಾರ್ ಮತ್ತು ತಂಡ ಆತನನ್ನು ಬಂಧಿಸಲು ಹೇಳಿತ್ತು.
ಈ ವೇಳೆ ಪೂರ್ಣೇಶ್ ಚಾಕುವಿನಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಪೇದೆ ಮಂಜುನಾಥ್ ಎಂಬವರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಎಸ್ಐ ದಿಲೀಪ್ ಕುಮಾರ್ ಅವರು ಆರೋಪಿ ಪೂರ್ಣೇಶ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಆತನನ್ನು ಚಿಕ್ಕಮಗಳೂರು ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೇದೆ ಮಂಜುನಾಥ್ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.