ಮನಮೋಹನ್‌ ಸಿಂಗರ ಯುಪಿಎ ಆಡಳಿತಾವಧಿಯಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು: ಇನ್ಫೋಸಿಸ್‌ ನಾರಾಯಣ ಮೂರ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
“ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಭಾರತದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು” ಎಂದು ಭಾರತದ ಐಟಿ ದಿಗ್ಗಜ ಕಂಪನಿ ಇನ್ಫೋಸಿಸ್‌ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಉಲ್ಲೇಖಿಸಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ – ಅಹಮದಾಬಾದ್ (IIMA) ನಲ್ಲಿ ಯುವ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ, ಮೂರ್ತಿ ಅವರು ಯುವ ಮನಸ್ಸುಗಳು ಭಾರತವನ್ನು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾಗೆ ಯೋಗ್ಯ ಪ್ರತಿಸ್ಪರ್ಧಿಯನ್ನಾಗಿ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ

“ಈ ಹಿಂದೆ ನಾನು ಲಂಡನ್‌ನಲ್ಲಿ ಎಚ್‌ಎಸ್‌ಬಿಸಿಯ ಬೋರ್ಡ್‌ನಲ್ಲಿದ್ದೆ. ಮೊದಲ ಕೆಲವು ವರ್ಷಗಳಲ್ಲಿ, ಸಭೆಗಳ ಸಮಯದಲ್ಲಿ ಬೋರ್ಡ್‌ರೂಮ್‌ನಲ್ಲಿ ಚೀನಾವನ್ನು ಎರಡರಿಂದ ಮೂರು ಬಾರಿ ಉಲ್ಲೇಖಿಸಿದರೆ ಭಾರತದ ಹೆಸರನ್ನು ಒಮ್ಮೆ ಉಲ್ಲೇಖಿಸಲಾಗುತ್ತಿತ್ತು. ಆದರೆ , ನಂತರ ಏನಾಯಿತೆಂದು ತಿಳಿಯಲಿಲ್ಲ. ಭಾರತದ ಉಲ್ಲೇಖ ಕಡಿಮೆಯಾಯಿತು. ಆದರೆ ಚೀನಾದ ಹೆಸರನ್ನು ಸುಮಾರು 30 ಬಾರಿ ತೆಗೆದುಕೊಳ್ಳಲಾಯಿತು. ಯುಪಿಎ ಅವಧಿಯಲ್ಲಿ ಸರಿಯಾದ ನಿರ್ಣಯ ತೆಗೆದುಕೊಳ್ಳದ ಕಾರಣ ಭಾರತವು ತಡವರಿಸಿತು, ಎಲ್ಲವೂ ವಿಳಂಬವಾಯಿತು. ನನಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ಅಪಾರ ಗೌರವವಿದೆ, ಅವರೊಬ್ಬ ಅಸಾಧಾರಣ ವ್ಯಕ್ತಿ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

“ಆದ್ದರಿಂದ, ಜನರು ಇತರ ಯಾವುದೇ ದೇಶದ ಹೆಸರನ್ನು, ವಿಶೇಷವಾಗಿ ಚೀನಾವನ್ನು ಉಲ್ಲೇಖಿಸಿದಾಗ ಭಾರತದ ಹೆಸರನ್ನು ನಮೂದಿಸುವಂತೆ ಮಾಡುವುದು ನಿಮ್ಮ (ಯುವ ಪೀಳಿಗೆ) ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಬಳಿ ಆ ಸಾಧನೆ ಮಾಡುವ ಎಲ್ಲ ಶಕ್ತಿಯಿದೆ” ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

“ಬಹುಪಾಲು ಪಾಶ್ಚಿಮಾತ್ಯರು ಭಾರತವನ್ನು ಕೀಳಾಗಿ ನೋಡುತ್ತಿದ್ದ ಕಾಲವಿತ್ತು, ಆದರೆ ಇಂದು, ದೇಶದ ಬಗ್ಗೆ ಒಂದು ನಿರ್ದಿಷ್ಟ ಮಟ್ಟದ ಗೌರವವಿದೆ, ಅದು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ” ಎಂದು ಇನ್ಫೋಸಿಸ್ ಮಾಜಿ ಅಧ್ಯಕ್ಷರು ಹೇಳಿದ್ದಾರೆ. ಅವರ ಪ್ರಕಾರ, ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ 1991 ರ ಆರ್ಥಿಕ ಸುಧಾರಣೆಗಳು ಮತ್ತು ಪ್ರಸ್ತುತ ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್‌ಡಿಎ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ಟಾರ್ಟಪ್ ಇಂಡಿಯಾ’ ಮುಂತಾದ ಯೋಜನೆಗಳು ದೇಶವನ್ನು ಸಬಲಗೊಳಿಸಲು ಸಹಾಯ ಮಾಡಿವೆ.

“ನಾನು ನಿಮ್ಮ ವಯಸ್ಸಿನಲ್ಲಿದ್ದಾಗ, ಹೆಚ್ಚಿನ ಜವಾಬ್ದಾರಿ ಇರಲಿಲ್ಲ ಏಕೆಂದರೆ ನನ್ನಿಂದ ಅಥವಾ ಭಾರತದಿಂದ ಹೆಚ್ಚು ನಿರೀಕ್ಷಿಸಿರಲಿಲ್ಲ. ಇಂದು ನೀವು ದೇಶವನ್ನು ಮುನ್ನಡೆಸುತ್ತೀರಿ ಎಂಬ ನಿರೀಕ್ಷೆಯಿದೆ. ನೀವು ಭಾರತವನ್ನು ಚೀನಾದ ಯೋಗ್ಯ ಪ್ರತಿಸ್ಪರ್ಧಿಯಾಗಿ ಮಾಡಬಹುದು ಎಂದು ನಾನು ಭಾವಿಸುತ್ತೇನೆ. ಚೀನಾ ವಿರುದ್ಧ ಭಾರತವನ್ನು ಸರಿಸಮನಾಗಿ ಎತ್ತಿ ನಿಲ್ಲಿಸುವ ಹೊಣೆ ನಿಮ್ಮ ಮೇಲಿದೆ” ನಾರಾಯಣ ಮೂರ್ತಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!