Thursday, March 30, 2023

Latest Posts

ಭ್ರಷ್ಟಾಚಾರ ನಿಯಂತ್ರಣದಿಂದ ಮಾತ್ರ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಸಾಧ್ಯ – ನ್ಯಾ. ಸಂತೋಷ್‌ಹೆಗ್ಡೆ

ಹೊಸದಿಗಂತ ವರದಿ ಮಂಡ್ಯ :

ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದನ್ನು ನಿಯಂತ್ರಿಸಿದರೆ ಮಾತ್ರ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಿಸಿದರು.

ನಗರದ ಜ್ಞಾನಸಾಗರ ಕ್ಯಾಂಪಸ್‌ನಲ್ಲಿ ಎಸ್.ಬಿ.ಎಜುಕೇಶನ್ ಟ್ರ್ಟ್ ಮಾಂಡವ್ಯ ಶಿಕ್ಷಣ ಮಹಾ
ವಿದ್ಯಾಲಯದ ವತಿಯಿಂದ ನಡೆದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಸಿ ಅವರು ಮಾತನಾಡಿದರು.
ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ದುರಾಸೆ ಮತ್ತು ಅಪ್ರಾಮಾಣಿಕತೆಯ ಸಮಾಜವನ್ನು ಬದಲಿಸಲು ಗಟ್ಟಿಯಾಗಿ ನಿಲ್ಲುವ ಮೂಲಕ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಭ್ರಷ್ಟಾಚಾರಕ್ಕೆ ದುರಾಸೆಯೇ ಕಾರಣ :
ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳಿಗೆ ದುರಾಸೆಯೇ ಮೂಲ ಕಾರಣ. ಎಲ್ಲಾ ಕಾಯಿಲೆಗಳಿಗೆ ಔಷಧಿಯಿದ್ದರೂ ದುರಾಸೆಗೆ ಔಷಧಿಯಿಲ್ಲ. ಇದನ್ನು ಹೋಗಲಾಡಿಸಲು ಒಂದೇ ದಾರಿ ತೃಪ್ತಿ .ತೃಪ್ತಿಯಿಂದ ದುರಾಸೆಯನ್ನು ಮಟ್ಟ ಹಾಕಬಹುದು ಎಂದು ಹೇಳಿದರು.

ಹೆಚ್ಚು ಓದಿ ದೊಡ್ಡ ಹುದ್ದೇಗೇರುವ ಆಕಾಂಕ್ಷೆ ಇರಬೇಕು. ಆ ಮೂಲಕ ಶ್ರೀಮಂತರಾಗುವುದು ತಪ್ಪಲ್ಲ. ಇನ್ನೊಬ್ಬರ ಜೇಬಿಗೆ, ಮತ್ತೊಬ್ಬರ ಹೊಟ್ಟೆಗೆ ಕೈ ಹಾಕಿ ಸಿರಿವಂತರಾಗಬೇಕಿಲ್ಲ ಎಂದರು.
ಜೀಪ್ ಹಗರಣದಿಂದ ಕಲ್ಲಿದ್ದಲು ಹಗರಣಗಳವರೆಗೆ ಉದಾಹರಣೆ ನೀಡಿದ ಸಂತೋಷ್ ಹೆಗ್ಡೆ ಅವರು ಸರ್ಕಾರ 1 ರೂ.ಅಭಿವೃದ್ಧಿಗೆ ನೀಡಿದರೆ ಕೊನೆ ಹಂತಕ್ಕೆ 15 ಪೈಸೆ ಮಾತ್ರ ತಲುಪಲಿದೆ ಎಂದು ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಬಹಿರಂಗವಾಗಿ ಹೇಳಿದ್ದರು. 2023ರ ಇಂದಿನ ಕಾಲಘಟ್ಟದಲ್ಲಿ 100 ರೂ.ನೀಡಿದರೆ 15 ಪೈಸೆಯಷ್ಟೇ ಕಡೆ ಹಂತಕ್ಕೆ ತಲುಪುತ್ತಿದೆ ಎಂದು ವಿಷಾದಿಸಿದರು.

ಜೈಲಿಗೆ ಹೋಗಿಬಂದವರಿಗೆ ಜೈಕಾರ :
ಹಿಂದೆ ಕಾರಣಾಂತರಗಳಿಂದ ಜೈಲಿಗೆ ಹೋಗಿ ಬಂದವರ ಕುಟುಂಬವನ್ನು ಜನರು ಕೀಳಾಗಿ ನೋಡುತ್ತಿದ್ದರು. ಆದರೆ, ಪ್ರಸ್ತುತ ಜೈಲಿಗೆ ಹೋಗಿ ಬರುವವರಿಗೆ ಹಾರ ತುರಾಯಿ ಹಾಕಿ, ಜೈಕಾರ ಹಾಕಿ ಅಭಿನಂದಿ ಸುತ್ತಿದ್ದಾರೆಂದು ವಿಷಾದಿಸಿದರು.

ಪ್ರಜಾಪ್ರಭುತ್ವದಲ್ಲಿ ಮತದಾರರೇ ಉತ್ತಮ ಮಟ್ಟದಲ್ಲಿರುವ ವ್ಯಕ್ತಿಗಳು. ಮತದಾರರ ಕೈಯಿಂದಲೇ ಪ್ರಜಾಪ್ರಭುತ್ವ ಉಳಿಯಬೇಕಿದೆ. ಪ್ರತಿಯೊಬ್ಬ ಮತದಾರರು ಉತ್ತಮ ವ್ಯಕ್ತಿಯನ್ನ ಆಯ್ಕೆ ಮಾಡಬೇಕು.
ಚುನಾವಣೆ ಬರುತ್ತಿದೆ, ಐಎಎಸ್ ಐಪಿಎಸ್ ಅಧಿಕಾರಿಗಳು ರಾಜೀನಾಮೆ ಕೊಟ್ಟು ಚುನಾವಣೆಗೆ ನಿಲುತ್ತಿದ್ದಾರೆ.ಆದ್ದರಿಂದ ಇವರುಗಳು ಜನತಾ ಸೇವೆಗೆ ಬಂದಿದ್ದಾರಾ ಅಥವಾ ಬೇರೆ ಉದ್ದೇಶಕ್ಕೆ ಬಂದಿದ್ದಾರಾ ಎಂದು ನೋಡಿ ಮತದಾರರು ಮತ ಹಾಕಬೇಕು. ಜನರ ಹಿತಾಸಕ್ತಿ ಇರುವಂತ ಅಭ್ಯರ್ಥಿ ಆಯ್ಕೆಯಾದರೆ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಬಿ ಎಜುಕೇಶನ್ ಟ್ರ್ಟ್ ಅಧ್ಯಕ್ಷ ಪ್ರೊ.ಬಿ. ಶಿವಲಿಂಗಯ್ಯ ,ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲರಾದ ಡಾ.ಪಿ.ಸುಮಾರಾಣಿ, ಹೆಚ್.ಎಂ. ಶ್ರೀನಿವಾಸ್ ಹಾಜರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!