October 12, 2026
Monday, October 12, 2026
spot_img

ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಇಡಿ ಸಮನ್ಸ್: ನಮಗೆ ಕಿರುಕುಳ ನೀಡಲಾಗುತ್ತಿದೆ ಎಂದ ಡಿಕೆಶಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಸಮನ್ಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ , ನಮಗೆ ಕಿರುಕುಳ ನೀಡಲಾಗುತ್ತಿದೆ. ಇದು ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.

ನಾವು ಮೊದಲಿನಿಂದಲೂ ತನಿಖೆಗೆ ಸಹಕರಿಸುತ್ತಲೇ ಬಂದಿದ್ದೇವೆ. ಇಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಇಷ್ಟೆಲ್ಲಾ ಆದರೂ ಇಡಿ ಚಾರ್ಜ್ ಶೀಟ್ ಹಾಕಿರೋದು ಏಕೆ ಎಂಬುದೇ ಗೊತ್ತಿಲ್ಲ. ಇದರಲ್ಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ. ನಾವು ಕಾನೂನಾತ್ಮಕವಾಗಿ ನ್ಯಾಯಲಯದಲ್ಲಿ ಹೋರಾಟ ಮಾಡುತ್ತೇವೆʼ ಎಂದರು.

ನನಗೆ ಹಾಗೂ ನನ್ನ ತಮ್ಮ ಡಿ.ಕೆ.ಸುರೇಶ್‌ಗೆ ಇಡಿ ಸಮನ್ಸ್ ನೀಡಿದೆ. ಈಗಾಗಲೇ ನಾವು ಇದಕ್ಕೆ ಹಿಂದೆಯೇ ಉತ್ತರ ಕೊಟ್ಟಿದ್ದೆವು. ಆದರೂ ನಮಗೆ ಸಮನ್ಸ್ ನೀಡಿರುವುದು ಆಘಾತಕಾರಿ. ದೆಹಲಿ ಪೊಲೀಸರು ಡಿಸೆಂಬರ್ 19 ನೇ ತಾರೀಕಿನ ಒಳಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ ಎಂದು ಹೇಳಿದರು.

ನಾವು ತೆರಿಗೆ ಪಾವತಿ ಮಾಡುತ್ತಿದ್ದೇವೆ. ನಮ್ಮ ಹಣವನ್ನು ನಮಗೆ ಬೇಕಾದವರಿಗೆ ನೀಡುತ್ತೇವೆ. ಕಿರುಕುಳ ನೀಡಲು ಪಿಎಂಎಲ್‌ಎ ಪ್ರಕರಣ ಕೂಡ ದಾಖಲಿಸಿದ್ದರು. ಆನಂತರ ಏನಾಯಿತು? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಬಲಿಗರಿಗೆ ಕಿರುಕುಳ ನೀಡುವುದು, ಜತೆಗೆ ಗೊಂದಲ ಮೂಡಿಸುವುದು ಇದರ ಉದ್ದೇಶ ಎಂದರು.

ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ನೋಟಿಸ್ ನೀಡಿದೆ. ನ್ಯಾಷನಲ್ ಹೆರಾಲ್ಡ್, ಯಂಗ್ ಇಂಡಿಯಾ ಇವು ನಮ್ಮ ಕಾಂಗ್ರೆಸ್ ಪಕ್ಷದ ಸಂಸ್ಥೆಗಳು. ನಾವು ಕಾಂಗ್ರೆಸ್ಸಿಗರಾದ ಕಾರಣಕ್ಕೆ ಈ ಸಂಸ್ಥೆಗಳು ಕಷ್ಟ ಕಾಲದಲ್ಲಿದ್ದಾಗ ನಮ್ಮ ಟ್ರಸ್ಟ್‌ಗಳಿಂದ ದೇಣಿಗೆ ನೀಡಿದ್ದೇವೆ. ನಮ್ಮಂತೆ ಅನೇಕ ಜನರು ಸಹಾಯ ಮಾಡಿದ್ದಾರೆ ಎಂದರು.

Must Read