ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸೈಟ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ ಭೂ ಸ್ವಾಧೀನ ಪ್ರಕ್ರಿಯೆಯೇ ಅಕ್ರಮ ಎಂದು ಹೇಳಿದೆ. ಮುಡಾ ಅಕ್ರಮದ ತನಿಖೆ ನಡೆಸುತ್ತಿರುವ ಇಡಿ ಲೋಕಾಯುಕ್ತ ಎಡಿಜಿಪಿಗೆ ತನಿಖೆಯ ಪ್ರಗತಿಯ ಬಗ್ಗೆ ಪತ್ರ ಬರೆದಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ವಾಗತಿಸಿದ್ದಾರೆ.
ಪ್ರಾಥಮಿಕ ಹಂತದಲ್ಲಿ ಇಡಿ ನಡೆಸಿದ ತನಿಖೆಯಲ್ಲಿ 700 ಕೋಟಿ ರೂ.ಗೂ ಹೆಚ್ಚು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ. ಮುಡಾ ಅಕ್ರಮದ ಬಗ್ಗೆ ಎಳೆಎಳೆಯಾಗಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಜಾರಿ ನಿರ್ದೇಶನಾಲಯ ಬಿಡಿಸಿದೆ. ಸಿಎಂ ಪತ್ನಿಗೆ ಕೊಟ್ಟಿರುವ 14 ಸೈಟ್‌ಗಳು ಸಹ ಅಕ್ರಮ ಎಂದು ಇಡಿ ಉಲ್ಲೇಖಿಸಿದೆ ಎಂದು ಹೇಳಿದ್ದಾರೆ. ಲೋಕಾಯುಕ್ತ ಪೊಲೀಸರು ನಡೆಸಿದ ವಿಚಾರಣೆಯ ಬಗ್ಗೆಯೂ ವಿಜಯೇಂದ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಡಾ ಹಗರಣವು ಕೇವಲ ಮುಖ್ಯಮಂತ್ರಿ ಕುಟುಂಬಕ್ಕೆ 14 ನಿವೇಶನ ಹಂಚಿಕೆಗೆ ಸೀಮಿತವಾಗಿಲ್ಲ ಎಂದು ನಾವು ಹೇಳುತ್ತಲೇ ಇದ್ದೇವೆ. ನೂರಾರು ಕೋಟಿ ರೂಪಾಯಿಗಳ ಹಗರಣ ಎಂದು ನಾನು ಈ ಹಿಂದೆಯೂ ಹೇಳಿದ್ದೆ ಎಂದು ಅವರು ತಿಳಿಸಿದರು.