ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಮ್ಯಾ ನಟಿಸಿರುವ ಒಂದು ಸಿನಿಮಾ ಈಗ ಬಿಡುಗಡೆ ಸಜ್ಜಾಗಿದೆ. ಇದನ್ನು ಹೊಸ ಸಿನಿಮಾ ಎನ್ನಬೇಕೋ ಅಥವಾ ಹಳೇ ಸಿನಿಮಾ ಎನ್ನಬೇಕು ಎಂಬುದು ಪ್ರೇಕ್ಷಕರಿಗೆ ಬಿಟ್ಟಿದ್ದು.
ಏಕೆಂದರೆ, ಈ ಸಿನಿಮಾ ಸೆಟ್ಟೇರಿದ್ದು ಹಲವು ವರ್ಷಗಳ ಹಿಂದೆ. ಒಂದಷ್ಟು ಕಾರಣಗಳಿಂದ ಈ ಚಿತ್ರದ ಕೆಲಸಗಳು ವಿಳಂಬ ಆಗಿದ್ದವು. ‘ರಕ್ತ ಕಾಶ್ಮೀರ’ ಎಂಬ ಶೀರ್ಷಿಕೆ ಇರುವ ಈ ಚಿತ್ರದಲ್ಲಿ ಉಪೇಂದ್ರ ಮತ್ತು ರಮ್ಯಾ ಜೋಡಿಯಾಗಿ ನಟಿಸಿದ್ದಾರೆ.
‘ಎಂಡಿಎಂ ಪ್ರೊಡಕ್ಷನ್’ ಬ್ಯಾನರ್ನಲ್ಲಿ ‘ರಕ್ತ ಕಾಶ್ಮೀರ’ ಸಿನಿಮಾ ನಿರ್ಮಾಣ ಆಗಿದೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಮತ್ತು ರಮ್ಯಾ ಮುಖ್ಯಪಾತ್ರದಲ್ಲಿ ನಟಿಸಿದ್ದು, ಈಗ ಸಿನಿಮಾದ ಕೆಲಸಗಳು ಕೊನೇ ಹಂತದಲ್ಲಿ ಇವೆ. ಆದಷ್ಟು ಬೇಗ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೀಡಿದ ಹೇಳಿಕೆಯನ್ನು ‘ರಕ್ತ ಕಾಶ್ಮೀರ’ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಚಿತ್ರತಂಡ ತಿಳಿದಿದೆ. ಇದು ಈ ಸಿನಿಮಾದ ಮುಖ್ಯ ಕಥಾಹಂದರ ಕೂಡ ಹೌದು. ದೇಶದ ಗಡಿಯಲ್ಲಿ ಮಾತ್ರವಲ್ಲದೇ ಬೆಂಗಳೂರಿನಲ್ಲೂ ಉಗ್ರಗಾಮಿಗಳ ಹಾವಳಿ ಇದೆ. ಅದರ ನಿರ್ಮೂಲನೆಯ ಕುರಿತ ಕಥೆಯನ್ನು ‘ರಕ್ತ ಕಾಶ್ಮೀರ’ ಸಿನಿಮಾದಲ್ಲಿ ತೋರಿಸಲಾಗುವುದು.