ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು 2025-26ರ ಸಾಲಿನ ಶೈಕ್ಷಣಿಕ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಮೂಲಕ ಶಾಲಾ ಕರ್ತವ್ಯದ ದಿನಗಳು ಮತ್ತು ರಜಾ ಅವಧಿ ಬಗ್ಗೆ ಮಾಹಿತಿ ನೀಡಲಾಗಿದೆ.
ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಅವಧಿಗಳು ಮತ್ತು ರಜಾ ಅವಧಿಗಳು ಅನ್ವಯವಾಗಲಿದೆ ಎಂದು ಶಿಕ್ಷಣ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
2024-25ನೇ ಸಾಲಿನ ಚಟುವಟಿಕೆಗಳು ಮುಕ್ತಾಯವಾಗುತ್ತಲ್ಲಿದ್ದು, ಮುಂದಿನ 2025-26ನೇ ಸಾಲಿನ ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಪ್ರಾರಂಭಿಸಲು ಸದರಿ ಸಾಲಿನಲ್ಲಿ ಎಂದಿನಂತೆ ಅಗತ್ಯ ಪೂರ್ವಸಿದ್ಧತೆಗಾಗಿ 2025 ಮೇ 29ರಿಂದ ಶಾಲೆ ಪ್ರಾರಂಭಿಸಲು ಸೂಚಿಸಲಾಗಿದೆ. ಅದರಂತೆ ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ದಸರಾ ರಜೆ: 2025 ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 07 ರವರೆಗೆ, ಬೇಸಿಗೆ ರಜೆ: 2026 ಏಪ್ರಿಲ್ 11 ರಿಂದ 2026 ಮೇ 05 ರವರೆಗೆ ರಜೆ ಘೋಷಣೆ ಮಾಡಲಾಗಿದೆ. 2025-26ರ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 123 ರಜಾ ದಿನಗಳಿದ್ದು, ಉಳಿದ 242 ದಿನ ಶಾಲೆಗಳು ನಡೆಯಲಿವೆ. ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನಗಳು, ಪಠ್ಯೇತರ ಚಟುವಟಿಕೆ, ಪಠ್ಯ ಚಟುವಟಿಕೆ, ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ 22 ದಿನ, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನ, ಶಾಲಾ ಸ್ಥಳೀಯ ರಜೆಗಳಿಗೆ 04 ದಿನ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯಕ್ಕೆ 178 ದಿನಗಳನ್ನು ಮೀಸಲಿಡಲಾಗಿದೆ.