Friday, September 29, 2023

Latest Posts

ಶಿಕ್ಷಣಕ್ಕಿದೆ ದೇಶದ ಭವಿಷ್ಯವನ್ನು ಬದಲಾಯಿಸುವ ಶಕ್ತಿ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮ್ ಅನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ (National Education Policy) ಮೂರನೇ ವಾರ್ಷಿಕೋತ್ಸವದ ಆಚರಣೆಯ ಸಲುವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮೋದಿ, 12 ಭಾಷೆಗಳಲ್ಲಿ 100 ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು,29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 6,207 ಕೇಂದ್ರೀಯ ವಿದ್ಯಾಲಯಗಳು ಮತ್ತು ನವೋದಯ ವಿದ್ಯಾಲಯಗಳಿಗೆ ಪಿಎಂಶ್ರೀ ಶಾಲೆಗಳ ಯೋಜನೆಯಡಿ 630 ಕೋಟಿ ರೂ.ಗಳ ಮೊದಲ ಕಂತನ್ನು ಬಿಡುಗಡೆ ಮಾಡಿದರು.

ಇಂದು ದೇಶದ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಇದೆ. ದೇಶವು ಯಾವ ಗುರಿಯೊಂದಿಗೆ ಮುನ್ನಡೆಯುತ್ತಿದೆಯೋ ಅದನ್ನು ಸಾಧಿಸುವಲ್ಲಿ ಶಿಕ್ಷಣವು ಪ್ರಮುಖ ಪಾತ್ರವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಭಾರತವನ್ನು ಸಂಶೋಧನೆ ಮತ್ತು ಆವಿಷ್ಕಾರದ ಕೇಂದ್ರವನ್ನಾಗಿ ಮಾಡುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿಯಾಗಿದೆ. NCERT ಎಲ್ಲಾ 22 ಭಾರತೀಯ ಭಾಷೆಗಳೊಂದಿಗೆ ಸುಮಾರು 130 ವಿಷಯಗಳಲ್ಲಿ ಶಿಕ್ಷಣಕ್ಕಾಗಿ ಹೊಸ ಪುಸ್ತಕಗಳನ್ನು ಸಿದ್ಧಪಡಿಸುತ್ತಿದೆ. ಸಮಾಜ ವಿಜ್ಞಾನದಿಂದ ಇಂಜಿನಿಯರಿಂಗ್ ವರೆಗೆ ಶಿಕ್ಷಣ ಭಾರತೀಯ ಭಾಷೆಗಳಲ್ಲಿ ಇರಲಿದೆ. ಇದಕ್ಕೆ ಕಾರಣ ಎನ್‌ಇಪಿ. ಇಲ್ಲಿ ಎಲ್ಲಾ ಭಾಷೆಗಳಿಗೆ ಯೋಗ್ಯ ಗೌರವ ಸಿಗುತ್ತದೆ ಎಂದರು.

ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯಿಂದ ಭವಿಷ್ಯದ ತಂತ್ರಜ್ಞಾನದವರೆಗೆ, ಎನ್‌ಇಪಿ 2020 ಸಮಗ್ರ ಶಿಕ್ಷಣದ ಎಲ್ಲಾ ಅಂಶಗಳಿಗೆ ಸಮತೋಲಿತ ರೀತಿಯಲ್ಲಿ ಪ್ರಾಮುಖ್ಯತೆ ನೀಡುತ್ತದೆ. ಈ ಸುಧಾರಣೆಗಳಿಗೆ ಜೀವ ತುಂಬಲು ನಮ್ಮ ಶಿಕ್ಷಣ ತಜ್ಞರು ಬಹಳ ಶ್ರಮಿಸಿದ್ದಾರೆ. ಹೊಸ 5 + 3 + 3 + 4 ಮಾದರಿಯ ಶಿಕ್ಷಣ ವ್ಯವಸ್ಥೆಯು ದೇಶದಲ್ಲಿ ಏಕೀಕೃತ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ ಎಂದರು.

ಸಾಫ್ಟ್‌ವೇರ್ ತಂತ್ರಜ್ಞಾನದ ವಿಷಯಕ್ಕೆ ಬಂದಾಗ ಭವಿಷ್ಯವು ಭಾರತಕ್ಕೆ ಸೇರಿದೆ ಎಂದು ಜಗತ್ತಿಗೆ ತಿಳಿದಿದೆ. ಬಾಹ್ಯಾಕಾಶ ತಂತ್ರಜ್ಞಾನದ ವಿಷಯಕ್ಕೆ ಬಂದಾಗ, ಭಾರತದ ಸಾಮರ್ಥ್ಯದೊಂದಿಗೆ ಸ್ಪರ್ಧಿಸುವುದು ಸುಲಭವಲ್ಲ. ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಎಂಬ ಭಾರತದ ಮಾದರಿ ಪ್ರಶಂಸೆ ಗಳಿಸಿದೆ ಎಂದರು .
.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!