ಹೊಸದಿಗಂತ ವರದಿ ಪುತ್ತೂರು:
ರಾಜ್ಯದ ಶಿಕ್ಷಣ ಸಚಿವರ ಹೇಳಿಕೆಯಿಂದ ಕರಾವಳಿಯ ಶಿಕ್ಷಕರಿಗೆ ಮುಜುಗರ ಉಂಟಾಗಿದ್ದು, ಈ ನಿಟ್ಟಿನಲ್ಲಿ ಸಚಿವರು ತಮ್ಮ ಹೇಳಿಕೆಯನ್ನು ಹಿಂಪದೆಯಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನಿನ ಕಾರ್ಯದರ್ಶಿ ಡಾ. ಅವಿನ್ ಆಳ್ವ ಒತ್ತಾಯಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಕರಾವಳಿಯ ಜಿಲ್ಲೆಗಳು ಅತ್ಯುನ್ನತ ಸಾಧನೆ ಮಾಡಿದ್ದೂ ರಾಜ್ಯದ ಬಹುಪಾಲು ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಇದೇ ಜಿಲ್ಲೆಗಳಲ್ಲಿ ಇದೆ.
ಹಲವಾರು ಸರಕಾರಿ ಶಾಲೆಗಳು ಕೂಡ ಮಾದರಿ ಶಿಕ್ಷಣವನ್ನು ನೀಡುತ್ತಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ವೈದ್ಯಕೀಯ, ಆರ್ಥಿಕ, ಕಾನೂನು ವಿಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು, ಪ್ರತಿಷ್ಠಿತ ಸಂಸ್ಥೆಗಳಲ್ಲಿ, ಉನ್ನತ ಅಧಿಕಾರಿಗಳಾಗಿ, ಉದ್ಯಮಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದಲ್ಲದೇ, ದೇಶದ ಆರ್ಥಿಕತೆಯ ಆಧಾರ ಸ್ತಂಭವಾಗಿರುವ ಹಲವಾರು ರಾಷ್ಟ್ರೀಕೃತ ಬ್ಯಾಂಕ್‌ಗಳ ಉಗಮ ಸ್ಥಾನ ಇದೇ ಜಿಲ್ಲೆಗಳಾಗಿವೆ.
ಹಲವಾರು ವರ್ಷಗಳಿಂದ ಕರಾವಳಿಯ ಜಿಲ್ಲೆಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗು ಎಲ್ಲಾ ಮಾದರಿಯ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿಯೂ ಉಳಿದ ಜಿಲ್ಲೆಗಳಿಗಿಂತ ಅತ್ಯುನ್ನತ ಸಾಧನೆಯನ್ನು ಮಾಡುತ್ತಿದೆ. ಈ ಸಾಧನೆಗಳ ಹಿಂದಿರುವ ಕೈಗಳು ಇಲ್ಲಿನ ಶಿಕ್ಷಕರದ್ದು.
ಪಠ್ಯ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನೂ ಮಕ್ಕಳಿಗೆ ಕಲಿಸುತ್ತಿರುವ ಶಿಕ್ಷಕರ ಬಗ್ಗೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ನೀಡಿದ ಹೇಳಿಕೆ ಬೇಸರ ಉಂಟು ಮಾಡಿದ್ದು, ಓರ್ವ ಮಾಜಿ ಮುಖ್ಯಮಂತ್ರಿಯ ಪುತ್ರನಿಂದ ಈ ರೀತಿಯ ಹೇಳಿಕೆಯನ್ನು ನಿರೀಕ್ಷೆ ಮಾಡಿರಲಿಲ್ಲ.
ಅವರ ಹೇಳಿಕೆಯಿಂದ ಜಿಲ್ಲೆಯ ಶಿಕ್ಷಕ ವೃಂದಕ್ಕೆ ಮುಜುಗರ ಉಂಟಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಆದುದರಿಂದ ಶಿಕ್ಷಣ ಸಚಿವರು ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕೆಂದು ಡಾ. ಅವಿನ್ ಆಳ್ವ ಆಗ್ರಹಿಸಿದ್ದಾರೆ.