ಹೊಸದಿಗಂತ ವರದಿ ಅಂಕೋಲಾ:
ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಸರಾಯಿ ಸಾಗಾಟದತ್ತ ಹದ್ದಿನ ಕಣ್ಣು ಇಡಲಾಗಿದ್ದು ಪ್ರತಿದಿನ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗುತ್ತಿದೆ.
ಕಾರವಾರದ ಮಾಜಾಳಿಯಲ್ಲಿ ಸಮುದ್ರ ಮಾರ್ಗವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ
ಸರಾಯಿ ಸಾಗಿಸುತ್ತಿದ್ದ ಬೋಟನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.
ಸುಮಾರು 1.50 ಲಕ್ಷ ಮೌಲ್ಯದ ವಿಸ್ಕಿ ಗೋವಾ ಫೆನ್ನಿ ಬಾಟಲುಗಳು, ಉರಾಕ್ ಕ್ಯಾನುಗಳನ್ನು ಮತ್ತು 1.40 ಲಕ್ಷ ಮೌಲ್ಯದ ಬೋಟ್ ವಶಪಡಿಸಿಕೊಳ್ಳಲಾಗಿದ್ದು ಆರೋಪಿಗಳು ಓಡಿ ಪರಾರಿಯಾಗಿದ್ದಾರೆ.
ಕರಾವಳಿ ಕಾವಲು ಪಡೆ ನಿರೀಕ್ಷಕ ನಿಶ್ಚಲಕುಮಾರ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಪ್ರಕರಣ ದಾಖಲಿಸಲಾಗಿದೆ.
ಗೋವಾ ಕಾರವಾರ ಗಡಿಯಲ್ಲಿ ವಾಹನಗಳ ತೀವ್ರ ತಪಾಸಣೆ ಕಾರ್ಯ ನಡೆಸಲಾಗುತ್ತಿದ್ದು ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸುತ್ತಿರುವುದು ಕಂಡು ಬಂದಿದೆ.
ಎರಡು ದಿನಗಳ ಹಿಂದೆ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಗೋವಾ ಮದ್ಯ ಮಾಜಾಳಿ ಚೆಕ್ ಪೋಸ್ಟ್ ಬಳಿ ವಶ ಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು.