Friday, September 30, 2022

Latest Posts

ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರ ಚುನಾವಣೆ: ಮತ್ತೆ ದಿನಾಂಕ ಮುಂದೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ನ ರಾಷ್ಟ್ರಧ್ಯಕ್ಷ ಸ್ಥಾನ ಚುನಾವಣೆಯನ್ನು ಮತ್ತೆ ಮುಂದೂಡಲಾಗಿದೆ. ಹೊಸ ಬೆಳವಣಿಗೆಗಳ ಪ್ರಕಾರ ಕಾಂಗ್ರೆಸ್​ ಹೊಸ ರಾಷ್ಟ್ರಧ್ಯಕ್ಷರು ಬರುವ ದೀಪಾವಳಿಯ ಒಳಗೆ (ಅಕ್ಟೋಬರ್ 24) ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ಸೆಪ್ಟೆಂಬರ್ 21ರೊಳಗೆ ಕಾಂಗ್ರೆಸ್​ನ ಹೊಸ ಅಧ್ಯಕ್ಷರ ನೇಮಕವಾಗಬೇಕಿತ್ತು. ಆದರೆ ಈಗ ಈ ದಿನಾಂಕವನ್ನು ಒಂದು ತಿಂಗಳ ಮಟ್ಟಿಗೆ ಮುಂದೂಡಲಾಗಿದೆ. ಹಬ್ಬದ ಮುನ್ನ ಅಶುಭ ಕಾಲ ಇರುವುದರಿಂದ ಮತ್ತು ಉನ್ನತ ಹುದ್ದೆಯನ್ನು ಒಪ್ಪಿಕೊಳ್ಳಲು ರಾಹುಲ್ ಗಾಂಧಿ ನಿರಾಕರಿಸಿರುವುದರಿಂದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ ರಾಷ್ಟ್ರಾಧ್ಯಕ್ಷರ ಚುನಾವಣೆಯ ರೂಪುರೇಷೆ ನಿರ್ಧರಿಸಲು ಭಾನುವಾರ ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದೆ. ಸೋನಿಯಾ ಗಾಂಧಿ ಹಾಗೂ ಅವರ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಮೂವರೂ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿರುವುದರಿಂದ ಈ ಸಭೆ ವರ್ಚುವಲ್ ಮೋಡ್​ನಲ್ಲಿ ನಡೆಯಲಿದೆ.

2019ರ ಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆಯ ಹೊಣೆ ಹೊತ್ತು ರಾಹುಲ್ ಗಾಂಧಿ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿದ್ದರು. ಮಗನ ರಾಜೀನಾಮೆ ನಂತರ ಪಕ್ಷದ ಕೋರಿಕೆಯ ಮೇರೆಗೆ ಹಂಗಾಮಿ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡ ಸೋನಿಯಾ ಗಾಂಧಿ ಅವರು ಈಗಾಗಲೇ ತಮ್ಮ ಆರೋಗ್ಯವನ್ನು ಉಲ್ಲೇಖಿಸಿ ಉನ್ನತ ಹುದ್ದೆ ಒಪ್ಪಿಕೊಳ್ಳಲು ನೋ ಎಂದಿದ್ದಾರೆ.

ಇನ್ನು ಪ್ರಿಯಾಂಕಾ ಗಾಂಧಿವರು ಉಸ್ತುವಾರಿ ವಹಿಸಿಕೊಂಡ ಉತ್ತರ ಪ್ರದೇಶ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿರುವುದು ಗೊತ್ತಿದೆ. ಪಕ್ಷವು ಗಾಂಧಿ ಕುಟುಂಬದ ಹೊರಗಿನವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ರಾಹುಲ್ ಗಾಂಧಿ ಬಯಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!