ವಿಧಾನಸಭೆಗೆ ಅವಧಿಗೂ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆಗಳು ಇಲ್ಲ: ಶಾಸಕ ಜಿ.ಟಿ.ದೇವೇಗೌಡ

ಹೊಸ ದಿಗಂತ ವರದಿ,ಮೈಸೂರು:

ವಿಧಾನಸಭೆಗೆ ಅವಧಿಗೂ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆಗಳು ಇಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಗುರುವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಇನ್ನೂ 6 ತಿಂಗಳು ಉತ್ತಮ ಕೆಲಸ ಮಾಡಿ ನಂತರ ಚುನಾವಣೆಗೆ ಹೋಗಬಹುದು. ಆದ್ದರಿಂದ ಅವಧಿಗೆ ಮುನ್ನ ಚುನಾವಣೆ ಬರುವ ಸಾಧ್ಯತೆಗಳು ಕಂಡು ಬರುತ್ತಿಲ್ಲ ಎಂದು ಹೇಳಿದರು.
ಈ ಹಿಂದೆ ಎಸ್.ಎಂ. ಕೃಷ್ಣ ಅಧಿಕಾರದ ಅವಧಿಯಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆದಿತ್ತು. ಆ ಕಾರಣಕ್ಕಾಗಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿತ್ತು. ಆದ್ದರಿಂದ ಈಗ ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆಯುವುದಿಲ್ಲ ಎಂದರು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೂರದೃಷ್ಟಿಯಿಂದ ಮಾತನಾಡಿದ್ದಾರೆ. ವಯಸ್ಸಿನಲ್ಲಿ ಚಿಕ್ಕವರಾದರು ಪ್ರಬುದ್ಧತೆಯಿಂದ ಮಾತನಾಡಿದ್ದಾರೆ. ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಪಕ್ಷ ಸಂಘಟನೆಯ ದೃಷ್ಟಿಯಿಂದ ಇಲ್ಲಿಗೆ ಬಂದಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.
ಹಲಾಲ್ ಕಟ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಹಲಾಲ್ ಎಂದರೆ ನನಗೆ ಏನೂ ಗೊತ್ತಿಲ್ಲ. ನಮ್ಮಲ್ಲಿ ಆ ರೀತಿ ಸಮಸ್ಯೆ ಇಲ್ಲ. ಮೊನ್ನೆ ಇಲವಾಲದಲ್ಲಿ ಮುಸ್ಲಿಂ ಮಸೀದಿ ಉದ್ಘಾಟನೆ ಆಯಿತು. ಅಲ್ಲಿಗೆ ಹಿಂದೂಗಳು ಸಹ ಬಂದಿದ್ದರು. ಹಿಂದೂಗಳು ಮಾರಿ ಹಬ್ಬ ಮಾಡಿದರು. ಅದಕ್ಕೆ ಮುಸ್ಲಿಂಮರೂ ಬಂದಿದ್ದರು. ಹಿಂದೂಗಳು ಮುಸ್ಲಿಮರು ಹಳ್ಳಿಗಳಲ್ಲಿ ನೆಮ್ಮದಿಯಾಗಿದ್ದಾರೆ. ಹಾಗಾಗಿ ಗೊಂದಲ ಮಾಡಬೇಡಿ. ಜನರನ್ನು ನೆಮ್ಮದಿಯಾಗಿ ಬದುಕಲು ಬಿಡಿ. ಸರ್ವ ಧರ್ಮವಿರುವ ದೇಶ ನಮ್ಮದು. ಇಲ್ಲಿ ಯಾವುದೇ ಸಮಾಜವಿರಲಿ, ಇಲ್ಲಿಂದ ಯಾರನ್ನು ಓಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!