ಹಲಾಲ್ ವಿಚಾರದಲ್ಲಿ ಸರಕಾರದ ಮಧ್ಯಪ್ರವೇಶವಿಲ್ಲ: ಸಚಿವ ನಾಗೇಶ್

ಹೊಸ ದಿಗಂತ ವರದಿ,ಮಡಿಕೇರಿ:

ಹಲಾಲ್‌ ಎಂಬುದು ಒಂದು ಸಮುದಾಯದ ಆಚರಣೆ. ಅದು ಸರಕಾರದ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಅದರಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಾಲ್ ಬಗ್ಗೆ ನನಗೂ ತಿಳಿದಿರಲಿಲ್ಲ. ಬೇರೆ ಧರ್ಮದ ಆಚರಣೆ ನಮಗೆ ಏಕೆ ಎಂದು ಸಂಘಟನೆಗಳು ಪ್ರಶ್ನೆಯೆತ್ತಿವೆ. ವ್ಯಕ್ತಿ ಸ್ವಾತಂತ್ರ್ಯವನ್ನು ಈ ದೇಶ ನೀಡಿದೆ. ಹಲಾಲ್‌ ಮಾಡಬಾರದೆಂದು ಗಲಾಟೆ ನಡೆಸಿದ್ದರೆ, ಸರ್ಕಾರ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳುತ್ತಿತ್ತು. ಹಲಾಲ್‌ ಮಾಡಿರುವ ಮಾಂಸವನ್ನು ತಿನ್ನುವುದು ಬೇಡವೆಂದು ಸರ್ಕಾರ ಹೇಳಿಲ್ಲ. ಆದ್ದರಿಂದ ಸರ್ಕಾರ ಮಧ್ಯ ಪ್ರವೇಶಿಸುವ ಪ್ರಶ್ನೆಯೇ ಇಲ್ಲ. ಹಲಾಲ್‌ ಮಾಂಸ ಖರೀದಿಸುವುದು ಬಿಡುವುದು ಜನರಿಗೆ ಬಿಟ್ಟಿರುವ ವಿಚಾರ ಎಂದು ಸ್ಪಷ್ಟಪಡಿಸಿದರು.
ಹೆಚ್.ಡಿ.ಕೆಗೆ ತಿರುಗೇಟು: ಗಂಡಸುತನ ಬೇಕಿರುವುದು ಸರ್ಕಾರ ನಡೆಸುವುದಕ್ಕೆ ಅಲ್ಲ. ಗಂಡಸುತನ ಬೇಕಿರುವುದು ಯಾವುದಕ್ಕೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಅವರು ತಿರುಗೇಟು ನೀಡಿದರಲ್ಲದೆ, ರಾಜ್ಯ ಸರ್ಕಾರ ನಡೆಸುವ ಶಕ್ತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದೆ ಎಂದು ಪ್ರತಿಕ್ರಿಯಿಸಿದರು.
ಟಿಪ್ಪು ವಿಚಾರ-ಪರಿಶೀಲಿಸಿ ಕ್ರಮ:ಟಿಪ್ಪು ಸುಲ್ತಾನ್‌ ವಿಚಾರವನ್ನು ಪಠ್ಯದಿಂದ ಕೈಬಿಡುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಬಿ.ಸಿ.ನಾಗೇಶ್ ಅವರು, ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಟಿಪ್ಪು ಸುಲ್ತಾನ್ ವಿಷಯವನ್ನು ಪಠ್ಯದಿಂದ ಕೈಬಿಡುವಂತೆ ಈ ಹಿಂದೆ ಸರಕಶರಕ್ಕೆ ಪತ್ರ ಬರೆದಿದ್ದರು. ಅಲ್ಲದೆ ಟಿಪ್ಪು ಕುರಿತಾಗಿ ವಿದೇಶದಲ್ಲಿದ್ದ ಕೆಲವು ಪುಸ್ತಕಗಳನ್ನೂ ನೀಡಿದ್ದರು. ಇದನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ನೀಡಲಾಗಿದೆ. ಇದರೊಂದಿಗೆ ಮತ್ತಷ್ಟು ಪುಸ್ತಕಗಳ ಅಧ್ಯಯನ ನಡೆಯುತ್ತಿದೆ. ಎಲ್ಲಾ ಆಯಾಮದಲ್ಲೂ ಪರಿಶೀಲಿಸಿ ಸತ್ಯವಲ್ಲದ ಮಾಹಿತಿಯನ್ನು ಪಠ್ಯದಿಂದ ಕೈಬಿಡಲಾಗುವುದು’ ಎಂದು ಶಿಕ್ಷಣ ಸಚಿವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!