ಭಾರಿ ಭರವಸೆ ಮೂಡಿಸಿದ್ದ ಎಲೆಕ್ಟ್ರಿಕ್ ಸ್ಕೂಟರುಗಳಿಗೆ ಭಾರತದಲ್ಲೇಕೆ ಬೆಂಕಿ ಹೊತ್ತಿಕೊಳ್ಳುತ್ತಿದೆ?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಇತ್ತೀಚೆಗೆ, ಎಲೆಕ್ಟ್ರಿಕ್ ಸ್ಕೂಟರ್ ಒಂದು ರಸ್ತೆ ಮಧ್ಯೆ ಬೆಂಕಿ ಹೊತ್ತಿಸಿಕೊಂಡು ಧಗಧಗ ಉರಿಯುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಬ್ಯಾಟರಿ ಸ್ಫೋಟಗೊಂಡಿರುವುದೇ ಈ ವಿದ್ಯಮಾನಕ್ಕೆ ಕಾರಣವಾಗಿತ್ತು.

ಇದು ಕೇವಲ ಒಂದೇ ಉದಾಹರಣೆ ಎಂಬಂತಹ ಘಟನೆ ಏನಲ್ಲ. ಮಾಧ್ಯಮ ವರದಿಗಳ ಪ್ರಕಾರ ಕಳೆದೊಂದು ವರ್ಷದಲ್ಲಿ ಇಂಥ ಹತ್ತಕ್ಕೂ ಹೆಚ್ಚು ಘಟನೆಗಳಾಗಿವೆ. ಇದು ಎಲೆಕ್ಟ್ರಿಕ್ ಸ್ಕೂಟರುಗಳ ಸುರಕ್ಷತೆಯ ಬಗ್ಗೆ ದೊಡ್ಡ ಆತಂಕವನ್ನು ಹುಟ್ಟುಹಾಕಿದೆ.

ಬೆಂಕಿ ಹೊತ್ತಿಸಿಕೊಂಡ ಸ್ಕೂಟರುಗಳ ಪಟ್ಟಿಯಲ್ಲಿ ಒಲಾ, ಒಕಿನಾವಾ ಹಾಗೂ ಪ್ಯೂರ್ ಇವಿ ಕಂಪನಿಗಳ ಸ್ಕೂಟರುಗಳಿವೆ.

ಏನಿರಬಹುದು ಕಾರಣ?

ಇವತ್ತು ಭಾರತದಲ್ಲಿ ವಿದ್ಯುತ್ ಚಾಲಿತ ಸ್ಕೂಟರಿನ ಕಾರ್ಖಾನೆ ತೆರೆದಿರುವ ಹೆಚ್ಚಿನ ಕಂಪನಿಗಳು ಬಹುತೇಕವಾಗಿ ತಂತ್ರಜ್ಞಾನ ಮತ್ತು ವಿನ್ಯಾಸಗಳನ್ನು ಅಳವಡಿಸಿಕೊಂಡಿರುವುದು ಯುರೋಪಿನ ರಾಷ್ಟ್ರಗಳಲ್ಲಾದ ಸಂಶೋಧನೆಗಳ ಆಧಾರದಲ್ಲಿ.

ಒಲಾ ಸ್ಕೂಟರ್ ಅನ್ನೇ ಗಮನಿಸುವುದಾದರೆ ಅದು 2020ರಲ್ಲಿ ಆಮಸ್ಟರಡ್ಯಾಂ ಮೂಲದ ಇವಿ ಸ್ಕೂಟರ್ ಕಂಪನಿ ಎಟೆರ್ಗೊವನ್ನು ಸ್ವಾಧೀನಪಡಿಸಿಕೊಂಡು ಅದರ ವಿನ್ಯಾಸ ಮತ್ತು ತಂತ್ರಜ್ಞಾನಗಳನ್ನು ಭಾರತವೂ ಸೇರಿದಂತೆ ಜಗತ್ತಿನ ಎಲ್ಲ ಮಾರುಕಟ್ಟೆಗಳಲ್ಲಿ ಬಳಸಿಕೊಳ್ಳುವುದಾಗಿ ಹೇಳಿತ್ತು.

ಯುರೋಪಿನ ರಾಷ್ಟ್ರಗಳು ಚಳಿ ದೇಶಗಳು. ಭಾರತದ ಏಪ್ರಿಲ್-ಮೇ ಥರದ ಬೇಸಿಗೆಯನ್ನು ಅವು ನೋಡಿರುವುದೇ ಇಲ್ಲ. ಅಲ್ಲಿನ ವಾತಾವರಣಕ್ಕೆ ಬ್ಯಾಟರಿ ಬಿಸಿಯಾಗುವ ತೊಂದರೆ ತಲೆದೋರಿರುವುದಿಲ್ಲ. ಆದರೆ ಅದನ್ನು ಭಾರತದಂಥ ತೀವ್ರ ಬೇಸಿಗೆ ಅನುಭವಿಸುವ ದೇಶಗಳಲ್ಲಿ ಭಟ್ಟಿ ಇಳಿಸಿದಾಗ ಇಂಥ ವಿಸ್ಫೋಟದ ಸಮಸ್ಯೆ ಸಹಜವಾಗಿಯೇ ಎದುರಾಗುತ್ತಿದೆ ಎನ್ನುತ್ತಾರೆ ಪರಿಣತರು.

ಹೀಗಾಗಿ, ಭಾರತಕ್ಕೆ ತಕ್ಕ ವಿನ್ಯಾಸವನ್ನು ಅಭಿವೃದ್ಧಿಗೊಳಿಸಿಕೊಳ್ಳುವವರೆಗೆ ವಿದ್ಯುತ್ ಚಾಲಿತ ಸ್ಕೂಟರುಗಳ ಸುರಕ್ಷತೆ ಮೇಲಿನ ಆತಂಕ ಕರಗುವ ಸಾಧ್ಯತೆಗಳು ಕಡಿಮೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!