ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರದ ಸಬ್ಸಿಡಿ ಅಗತ್ಯವಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹೀಗಾಗಿ ಇವಿ ವಾಹನಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಬೇಡಿಕೆ ಹೆಚ್ಚಳ ಹಾಗೂ ಉತ್ಪಾದನಾ ವೆಚ್ಚ ತಗ್ಗಿರುವುದರಿಂದ ಇನ್ನು ಮುಂದೆ ಸಬ್ಸಿಡಿ ಅಗತ್ಯವಿಲ್ಲ ಎಂದು ದೆಹಲಿಯಲ್ಲಿ ನಡೆದ ಬ್ಲೂಮ್‌ಬರ್ಗ್ ಎನ್‌ಇಎಫ್ ಶೃಂಗಸಭೆಯಲ್ಲಿ ಗಡ್ಕರಿ ಹೇಳಿದ್ದಾರೆ.
ಆರಂಭದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯ ವೆಚ್ಚಗಳು ಹೆಚ್ಚಾಗಿತ್ತು. ಆದರೆ ಬೇಡಿಕೆ ಕಡಿಮೆ ಇತ್ತು. ಈಗ ಗ್ರಾಹಕರು ಇವಿ ಅಥವಾ ಸಿಎನ್‌ಜಿ ವಾಹನಗಳನ್ನು ಹೆಚ್ಚಾಗಿ ಆರಿಸಿಕೊಳ್ಳುತ್ತಿದ್ದಾರೆ. ಬೇಡಿಕೆ ಹೆಚ್ಚಾದಂತೆ ಉತ್ಪಾದನಾ ವೆಚ್ಚಗಳು ಕಡಿಮೆಯಾಗಿದೆ. ಇದರಿಂದಾಗಿ ಹೆಚ್ಚಿನ ಸಬ್ಸಿಡಿ ಅಗತ್ಯ ಇಲ್ಲ ಎಂದಿದ್ದಾರೆ.
ಗ್ರಾಹಕರು ಈಗ ಎಲೆಕ್ಟ್ರಿಕ್ ಮತ್ತು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್(ಸಿಎನ್‌ಜಿ) ವಾಹನಗಳನ್ನು ತಾವಾಗಿಯೇ ಆಯ್ಕೆ ಮಾಡುತ್ತಿದ್ದಾರೆ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ನಾವು ಹೆಚ್ಚಿನ ಸಬ್ಸಿಡಿಯನ್ನು ನೀಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ಕಡಿಮೆಯಾಗಿದೆ. ನನ್ನ ಅಭಿಪ್ರಾಯದಲ್ಲಿ, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಇನ್ನು ಮುಂದೆ ಸರ್ಕಾರದಿಂದ ಸಬ್ಸಿಡಿ ಅಗತ್ಯವಿಲ್ಲ ಮತ್ತು ಸಬ್ಸಿಡಿ ಕೇಳುವುದು ಇನ್ನು ಮುಂದೆ ಸಮರ್ಥನೀಯವಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ, ಹೈಬ್ರಿಡ್ ಸೇರಿದಂತೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಶೇ. 28 ರಷ್ಟು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಶೇ. 5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ.