ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕಬ್ಬಿನ ಗದ್ದೆಗೆ ಬೆಂಕಿ

ಹೊಸದಿಗಂತ ವರದಿ ,ಮುಂಡಗೋಡ:

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ 12 ರೈತರಿಗೆ ಸೇರಿದ್ದ 37 ಎಕರೆ ಜಮೀನು ಪ್ರದೇಶದಲ್ಲಿನ ಕಬ್ಬು ಬೆಳೆ ಸುಟ್ಟು ಅಪಾರ ಪ್ರಮಾಣದಲ್ಲಿ ಹಾನಿಯಾದ ಘಟನೆ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ಗುರುವಾರ ಜರುಗಿದೆ.
ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಸನಿಹದಲ್ಲಿರುವ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಹತ್ತಾರು ರೈತರ ಜಮಿನುಗಳಿದ್ದು ಈ ಪ್ರದೇಶದಲ್ಲಿ ರೈತರು ಕಬ್ಬು ಬೆಳೆಯನ್ನು ಬೆಳೆದಿದ್ದಾರೆ. ಈ ಕಬ್ಬಿನ ಗದ್ದೆಯಲ್ಲಿ ಹಾಯ್ದು ಹೋಗಿರುವ ವಿದ್ಯುತ್ ತಂತಿಯ ಲೈನ್ ಒಂದಕ್ಕೊಂದು ತಾಗಿ ಶಾರ್ಟ್ ಸಕಿ೯ಟ್ ಉಂಟಾದ ಪರಿಣಾಮ ಬೆಂಕಿಯ ಕಿಡಿಗಳು ಕಬ್ಬಿನ ಗದ್ದೆಯಲ್ಲಿ ಬಿದ್ದು ಬೆಂಕಿ ತಗುಲಿದೆ. ಇದರಿಂದಾಗಿ ಒಂದು ಗದ್ದೆಯಿಂದ ಅಕ್ಕ -ಪಕ್ಕದಲ್ಲಿನ ಹನ್ನೆರಡುಕ್ಕೂ ಅಧಿಕ ರೈತರ ಬೆಳೆಗೆ ಬೆಂಕಿ ಆವರಿಸಿಕೊಂಡಿದ್ದು ಇದರಿಂದಾಗಿ ಮೂವತ್ತೆರಡು ಲಕ್ಷಕ್ಕೂ ಅಧಿಕ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಸುಮಾರು ಒಂದು ಕೋಟಿ ಎಪ್ಪತ್ತೊಂದು ಲಕ್ಷ ಮೌಲ್ಯದ ಬೆಳೆಯನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ.
ಮುಂಡಗೋಡ ಕಲಘಟಗಿ ತಾಲೂಕಿನ ಮೂರು ಅಗ್ನಿಶಾಮಕ ದಳದವರು ಸಾರ್ವಜನಿಕರ ಸಹಕಾರದಿಂದ ನಿರಂತರವಾಗಿ ಪ್ರಯತ್ನಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವರ್ಷವಿಡೀ ಕಷ್ಟಪಟ್ಟು ಬೆಳೆದಿದ್ದ ಕಬ್ಬು ಬೆಳೆ ರೈತರ ಕಣ್ಣು ಎದುರಿಗೆ ಬೆಂಕಿ ದಗದಗ ದಹಿಸುವುದನ್ನು ಕಂಡು ರೈತರು ಕಣ್ಣಿರು ಹಾಕುತ್ತಿರುವುದು ಕಂಡು ಬಂದಿತು. ಬೆಂಕಿ ತಗುಲಿದಾಗ ಗಾಳಿಯೂ ಸಹ ಬೀಸುತ್ತಿದ್ದ ಪರಿಣಾಮ ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ದಳದವರು ಸಹ ಸಾಕಷ್ಟು ಪರಿಶ್ರಮ ಪಡಬೇಕಾಯಿತು.ಬೆಂಕಿ ನಂದಿಸಲು ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಎಸ್.ಮಂಜಣ್ಣ ಸಿಬ್ಬಂದಿಗಳಾದ ಬಸವರಾಜ ನಾಣಪೂರ, ಸೋಮಶೇಖರ ಜೀವಣ್ಣನವರ,ಹರೀಶ ಪಟಗಾರ,ಚಂದ್ರಪ್ಪ ಲಮಾಣಿ,ರಾಜೇಶ ಸವಣೂರ, ವಿಷ್ಣು ಗುಲ್ಯಾನವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!