ವಿದ್ಯುತ್ ಸ್ಪರ್ಶದಿಂದ ಅಭಿಮಾನಿ ಬಲಿ: ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಿದ ನಟ ಯಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್ ವುಡ್ ನಟ ಯಶ್ ಹುಟ್ಟು ಹಬ್ಬದ ದಿನದಂದು ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಗೆ ಬಲಿಯಾದ ಅಭಿಮಾನಿಗಳ ಕುಟುಂಬಕ್ಕೆ ಯಶ್ ತಲಾ ಐದು ಲಕ್ಷ ರೂಪಾಯಿ ನೀಡಿದ್ದಾರೆ.

ಈ ಘಟನೆ ನಡೆದ 11 ದಿನವಾಗಿದ್ದು, ಇಂದು ಅವರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಗನನ್ನು ನೆನೆದು ಕಣ್ಣೀರಿಟ್ಟ ಪಾಲಕರು, ಯಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಅವರನ್ನು ನನ್ನ ಮಗ ಎನ್ನಲೋ, ದೇವರು ಎನ್ನಲೋ ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ಒಂದು ಕಡೆ ಯಶ್ ಪರಿಹಾರವನ್ನು ನೀಡಿದ್ದರೆ ಮತ್ತೊಂದು ಕಡೆ ಅಭಿಮಾನಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯವೊಂದನ್ನು ಮಾಡಿದ್ದಾರೆ. ಸರ್ಕಾರ ಘೋಷಿಸಿದ 2 ಲಕ್ಷ ರೂಪಾಯಿ ಪರಿಹಾರ ಸಾಕಾಗಲ್ಲ. ಹೀಗಾಗಿ ಮೂವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡುವಂತೆ ಲಕ್ಷ್ಮೇಶ್ವರ ಸೂರಣಗಿ (Suranagi Village) ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.

ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬ (Yash Birthday) ಹಿನ್ನೆಲೆಯಲ್ಲಿ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!