ಕಾಡಾನೆ ದಾಳಿ: ಕಾರ್ಮಿಕ ಮಹಿಳೆ ಸಾವು

ಹೊಸದಿಗಂತ ವರದಿ ಚಿಕ್ಕಮಗಳೂರು:‌

ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆಯೊರ್ವರು ಸಾವಿಗೀಡಾದ ಘಟನೆ ಆಲ್ದೂರು ಸಮೀಪ ಹೆಡದಾಳು ಗ್ರಾಮದಲ್ಲಿ ಬುಧವಾರ ಮುಂಜಾನೆ ನಡೆದಿದೆ.

ಮೀನಾ (45) ಎಂಬಾಕೆ ಮೃತ ದುರ್ದೈವಿಯಾಗಿದ್ದು, ಆನೆ ದಾಳಿಗೆ ಕಳೆದ ಎರಡು ತಿಂಗಳಲ್ಲಿ ಸಂಭವಿಸಿರುವ ಎರಡನೇ ಬಲಿ ಇದಾಗಿದೆ. ಇದರಿಂದ ಜನತೆ ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಕಾಫಿ ತೋಟದ ಕೆಲಸಕ್ಕೆ ಹೋಗುವಾಗ ಆನೆ ದಾಳಿ ನಡೆದಿದೆ. ಆಲ್ದೂರು ವಲಯದ ವ್ಯಾಪ್ತಿಯಲ್ಲಿ 7 ಆನೆಗಳ ಹಿಂಡು ನಿರಂತರವಾಗಿ ಓಡಾಡುತ್ತಿದ್ದು, ಈ ಪೈಕಿ ಒಂದು ಆನೆ ಹಿಂಡಿನಿಂದ ಬೇರ್ಪಟ್ಟಿದೆ. ಇದೇ ಆನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ.

ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜನರು ರಸ್ತೆಯಲ್ಲಿ ಮಹಿಳೆಯ ಶವವನ್ನಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಆಲ್ದೂರು ಅರಣ್ಯ ವಲಯದಲ್ಲಿ ಆನೆ ದಾಳಿಗೆ ಪದೇ ಪದೇ ಸಾವುಗಳು ಸಂಭವಿಸುತ್ತಿದ್ದರೂ ಚುನಾಯಿತ ಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಶಾಸಕಿ ನಯನಾ ಮೋಟಮ್ಮ ಮತ್ತು ಅರಣ್ಯ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಗ್ರಾಮಸ್ಥರು ಅವರ ಯಾವುದೇ ಭರವಸೆಗಳನ್ನು ಒಪ್ಪುತ್ತಿಲ್ಲ. ಜನರ ಮನವೊಲಿಸುವ ಶಾಸಕರ ಪ್ರಯತ್ನವೂ ವಿಫಲವಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಬರಬೇಕು ಅಲ್ಲಿಯವರೆಗೆ ಶವ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಜನರು ಮೂಡಿಗೆರೆ ಪ್ರವಾಸದಲ್ಲೇ ಇರುವ ಮುಖ್ಯಮಂತ್ರಿಗಳನ್ನು ಇಲ್ಲಿಗೆ ಕರೆಸಬೇಕು ಎಂದು ಶಾಸಕಿ ಮೋಟಮ್ಮ ಅವರನ್ನು ಆಗ್ರಹಿಸಿದರು.

ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬರುವವರೆಗೆ ನೀವು ಜಾಗ ಬಿಟ್ಟು ಕದಲಬಾರದು. ನಮಗೆ ಆನೆ, ಕಾಡು ಪ್ರಾಣಿಗಳಿಂದ ರಕ್ಷಣೆ ಕೊಡಿಸುವ ಜವಾಬ್ದಾರಿ ನಿಮ್ಮದು ಆ ಕಾರಣಕ್ಕೆ ನೀವು ಇಲ್ಲೇ ಇರಬೇಕು ಎಂದು ಶಾಸಕರನ್ನು ಆಗ್ರಹಿಸಿದರು.

ಹೊಲ, ಗದ್ದೆ, ತೋಟ, ಜನವಸತಿ ಪ್ರದೇಶಗಳಿಗೆ ದಾಳಿ ಇಡುತ್ತ ಬೆಳೆಹಾನಿ, ಜೀವಹಾನಿ ಉಂಟುಮಾಡುತ್ತಿರುವ ಆನೆ ಹಿಂಡು ಜನರ ನಿದ್ದೆಗೆಡಿಸಿದೆ. ಇಷ್ಟಾದರೂ ಅರಣ್ಯ ಇಲಾಖೆ ಪಟಾಕಿಗಳನ್ನು ಸಿಡಿಸಿ ಆನೆಗಳನ್ನು ಬೆದರಿಸುವಂತಹ ಕ್ರಮಗಳನ್ನು ಬಿಟ್ಟರೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ಕಣತಿ ಸಮೀಪ ವ್ಯಕ್ತಿಯೋರ್ವನನ್ನು ಆನೆ ಬಲಿ ಪಡೆದಿತ್ತು. ಅಂದು ಆನೆಗಳ ಹಾವಳಿ ನಿಯಮತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಸಿಬ್ಬಂದಿ ನೀಡಿದ್ದ ಭರವಸೆ ಹುಸಿಯಾಗಿದೆ. ಕೂಲಿ ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮೃತರ ಮನೆಯವರಿಗೆ ಒಂದಿಷ್ಟು ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿರುವ ಚುನಾಯಿತ ಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!