ಹೊಸದಿಗಂತ ಡಿಜಿಟಲ್ ಡೆಸ್ಕ್:
`ನಗುವ ಅನಿಲ’ ನೈಟ್ರಸ್ ಆಕ್ಸೈಡ್ ನಿಷೇಧಿಸಿ ಬ್ರಿಟನ್ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚಿನ ದಿನಗಳಲ್ಲಿ ಮನರಂಜನಾ ಸಾಧನವಾಗಿ ಯುವಕರು ಹೆಚ್ಚಾಗಿ ಈ ಲಾಫಿಂಗ್ ಗ್ಯಾಸ್ ಮೊರೆ ಹೋಗುತ್ತಿದ್ದು, ಸಣ್ಣ ಡಬ್ಬಿಗಳಲ್ಲಿ ಇದರ ಮಾರಾಟ ಎಗ್ಗಿಲ್ಲದೆ ನಡೆಯುತ್ತದೆ. ಇದರಿಂದಾಗಿ ಹೆಚ್ಚಿನ ಅಪರಾಧ ಪ್ರಕರಣಗಳ ಜೊತೆಗೆ ಅನಾರೋಗ್ಯ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡ ಸರ್ಕಾರ ಇಂತಹ ನಿರ್ಧಾರಕ್ಕೆ ಬಂದಿದೆ.
ಕಾನೂನುಬಾಹಿರ ಎಂದು ಪರಿಗಣಿಸಿದ ಈ ಗ್ಯಾಸ್ ಅನ್ನು ಬಳಸಿ, ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡವರಿಗೆ ಎರಡು ವರ್ಷ ಹಾಗೂ ಇದನ್ನು ಮಾರಾಟ ಮಾಡಿದ ಡೀಲರ್‌ಗಳಿಗೆ 14 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಅನಿಲದ ಬಳಕೆಯು ರಕ್ತಹೀನತೆ, ನರ ಹಾನಿ ಮತ್ತು ಬೆನ್ನುಹುರಿಯ ಗಾಯಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
“ನೈಟ್ರಸ್ ಆಕ್ಸೈಡ್‌ನ ದುರುಪಯೋಗವು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ ಮಾತ್ರವಲ್ಲದೆ, ಕಾನೂನುಬಾಹಿರವಾಗಿದೆ. ಇನ್ಮುಂದೆ ಇದನ್ನು ಬಳಸದಂತೆ ನಾವು ಸಾರ್ವಜನಿಕರಿಗೆ, ವಿಶೇಷವಾಗಿ ಯುವಜನರಿಗೆ ಸ್ಪಷ್ಟ ಸಂಕೇತವನ್ನು ಕಳುಹಿಸುತ್ತಿದ್ದೇವೆ” ಎಂದು ಯುಕೆ ಗೃಹ ಸಚಿವ ಕ್ರಿಸ್ ಫಿಲ್ಪ್ ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದ ಮಾದಕ ದ್ರವ್ಯದ ಬಳಕೆಯು ಸಮಾಜವಿರೋಧಿ ವರ್ತನೆಗೆ ಕಾರಣವಾಗಿದೆ. ಕಾನೂನು ಉಲ್ಲಂಘಿಸುವವರಿಗೆ ಅನಿಯಮಿತ ದಂಡ ವಿಧಿಸಲಾಗುತ್ತದೆ. ಪದೇ ಪದೇ ಅಪರಾಧ ಮಾಡುವವರಿಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.