ಹೊಸದಿಗಂತ ವರದಿ ಮಡಿಕೇರಿ:
ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವಯೋವೃದ್ಧ ಕಾರ್ಮಿಕನ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಘಾಸಿಗೊಳಿಸಿರುವ ಘಟನೆ ಶುಕ್ರವಾರ ಸಂಜೆ ಕಂಬಿಬಾಣೆಯಲ್ಲಿ ನಡೆದಿದೆ.
ಭೂತನಕಾಡು ಟಾಟಾ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಾಗಿರುವ ರಾಮಸ್ವಾಮಿ ಎಂಬವರೇ ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡವರು.
ಶುಕ್ರವಾರ ಸಂಜೆ 6ಗಂಟೆ ಸುಮಾರಿಗೆ ಕಂಬಿಬಾಣೆಯ ವೃಂದಾವನ ತೋಟದಲ್ಲಿ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ದಿಢೀರನೇ ಎದುರಾದ ಕಾಡಾನೆ ರಾಮಸ್ವಾಮಿ ಅವರ ಮೇಲೆರಗಿ ನೆಲಕ್ಕೆ ಬೀಳಿಸಿ ಕಾಲನ್ನು ತುಳಿಯಲಾರಂಭಿಸಿದೆ. ಅದೃಷ್ಟವಶಾತ್ ಅವರ ಹಿಂದೆ ಬರುತ್ತಿದ್ದ ತೋಟದ ರೈಟರ್ ಆನೆಯನ್ನು ಕಂಡು ಜೋರಾಗಿ ಬೊಬ್ಬಿಟ್ಟಿದ್ದಾರೆ. ಅವರ ಕಿರುಚಾಟಕ್ಕೆ ಕಾಡಾನೆ ರಾಮಸ್ವಾಮಿಯವರನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತಿದೆ. ತೋಟದ ರೈಟರ್ ಅವರಿಂದಾಗಿ ರಾಮಸ್ವಾಮಿ ಸಾವಿನ ದವಡೆಯಿಂದ ಪಾರಾಗಿದ್ದು, ಕಾಲಿಗೆ ಗಂಭೀರವಾಗಿ ಗಾಯಗೊಂಡಿರುವ ರಾಮಸ್ವಾಮಿ ಅವರನ್ನು ಮಡಿಕೇರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.