ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶ-ವಿದೇಶಗಳ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಜೊತೆಗೆ ನಾಳೆ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.
ಈ ಮಧ್ಯೆ ಟೆಸ್ಲಾ ಮತ್ತು ಎಕ್ಸ್ ಮಾಲೀಕ ಎಲಾನ್ ಮಸ್ಕ್ ಕೂಡ ನರೇಂದ್ರ ಮೋದಿಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಸ್ಕ್, ವಿಶ್ವದ ಅತಿದೊಡ್ಡ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತದಲ್ಲಿ ನನ್ನ ಕಂಪನಿಗಳು ಅತ್ಯಾಕರ್ಷಕ ಕೆಲಸ ಮಾಡಲಿರುವ ಆಶಾಭಾವನೆ ನನ್ನಲ್ಲಿದೆ ಎಂದು ಹೇಳಿದ್ದಾರೆ.
ಈ ವರ್ಷದ ಏಪ್ರಿಲ್ 21 ಹಾಗೂ 22ರಂದು ಮಸ್ಕ್ ಭಾರತಕ್ಕೆ ಭೇಟಿ ನೀಡಲು ಸಿದ್ಧರಾಗಿದ್ದರು. ಆದರೆ ಅವರು ಕೊನೆಯ ಕ್ಷಣದಲ್ಲಿ ಭಾರತ ಪ್ರವಾಸವನ್ನು ರದ್ದುಗೊಳಿಸಿದರು. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, ದುರದೃಷ್ಟವಶಾತ್, ಟೆಸ್ಲಾ ಕಟ್ಟುಪಾಡುಗಳಿಂದಾಗಿ ಭಾರತ ಭೇಟಿ ವಿಳಂಬವಾಗುತ್ತದೆ. ಆದರೆ ಈ ವರ್ಷಾಂತ್ಯದಲ್ಲಿ ಭೇಟಿ ನೀಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಎಂದಿದ್ದರು.
ಮೋದಿ ಪ್ರತಿಕ್ರಿಯೆ
ಇನ್ನು ಎಲನ್ ಮಸ್ಕ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನರೇಂದ್ರ ಮೋದಿ, ನಿಮ್ಮ ಪ್ರೀತಿಗೆ ಧನ್ಯವಾದಗಳು ಮಸ್ಕ್, ಪ್ರತಿಭಾವಂತ ಭಾರತೀಯ ಯುವಕರು, ರಾಜಕೀಯ ನೀತಿಗಳು ಮತ್ತು ಸ್ಥಿರವಾದ ಪ್ರಜಾಪ್ರಭುತ್ವದ ರಾಜಕೀಯವು ನಮ್ಮ ಎಲ್ಲಾ ಪಾಲುದಾರರಿಗೆ ವ್ಯಾಪಾರ ವಾತಾವರಣವನ್ನು ಒದಗಿಸುವುದನ್ನು ಮುಂದುವರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.